Friday, June 20, 2014

ಸಣ್ಣ ಪ್ರವಾಸ







 ಟೀಂ ಔಟಿಂಗ್ ಎನ್ನುವ ಹೆಸರಲ್ಲಿ ಪ್ರವಾಸ ಮಾಡುವ ಯೋಚನೆ ಹೊಳೆದಿದ್ದೇ ತಡ, ಮೈ-ಮನಸುಗಳು ಪುಲಕಿತವಾಗಿ ಸ್ಥಳ ಆಯ್ಕೆಯ ಕಾರ್ಯವು ಶುರುವಾಯಿತು. ಒಟ್ಟು 7 ಜನರಿರುವ ನಮ್ಮ ತಂಡಕ್ಕೆ ಸೂಕ್ತವಾದ ಸ್ಥಳದ ಆಯ್ಕೆ ಅಷ್ಟು ಸುಲಭ ವಾಗಲಿಲ್ಲ. ರೆಸಾರ್ಟ್ಗೆ ಹೋಗಿ ದಿನ ಕಳೆಯುವ ಎಂದು ಒಬ್ಬ ಪಾನಮಿತ್ರ ಹೇಳಿದರೆ, ಮತ್ತೊಬ್ಬ ಕಾಡು ಸುತ್ತುವ ಎಂದ, ಮಗದೊಬ್ಬ ವಾಟರ್ ಪಾರ್ಕ ಗೆ ಹೋಗಿ ಆಟ ಆಡುವ ಎಂದ.ಮದುವೆ ನಿಶ್ಚಯವಾದ ಮದುಮಗನೊಬ್ಬ BBQ Nation ಹೋಟೆಲ್ ಹೋಗಿ ಹೊಟ್ಟೆ ಬಿರಿಯುವಷ್ಟು ತಿನ್ನುವ ಎನ್ದ.  

ಹೀಗೆ ಪ್ರವಾಸದ ಸ್ಥಳವು ಪ್ರಯಾಸವಾಗುತ್ತಾ, ತಲೆ ಕೆಡಿಸಲು ಶುರುಮಾಡಿತು. ಸರಿ ಎಲ್ಲರ ಅವಶ್ಯಕತೆಗಳನ್ನು ಸಮಾದಾನ ಪಡಿಸುವ ಸ್ಥಳ ಕೊನ್ನೆಗೂ ಸಿಕ್ಕಿತು. ಮುಂಬೈನಿಂದ ಬೇಗ ತಲುಪಲು ಸಾಧ್ಯವಾಗುವ 'ಅಲಿಬಾಗ್ ' ನಮ್ಮ ಸರ್ವ ಸಮ್ಮತ ಆಯ್ಕೆಯಾಯಿತು. 

ಅಲಿಬಾಗ್ ನಲ್ಲಿ ನೋಡಬೇಕಾದ, ವಾಸ್ತವ್ಯದ ವಿವರಗಳು ಗೂಗಲ್ ಹುಡುಕಾಟದ ಇಂಜಿನ್ ನಲ್ಲಿ ಸುಲಭವಾಗಿ ಸಿಕ್ಕವು. ಅಲ್ಲಿಯ ಹೋಂಸ್ಟೇ ಯೊಂದನ್ನು ನಡೆಸುತ್ತಿರುವ ವ್ಯಕ್ತಿಯೊಡನೆ ಫೋನಿನಲ್ಲಿ ಮಾತುಕತೆಯಾಗಿ, 2 ರೂಮಿರುವ ಮನೆಯು ಕೇವಲ 3000/- ರೂ ಗಳಿಗೆ ನಿಗದಿಯಾಯಿತು. ಅಲಿಬಾಗ್ ಕೊಂಕಣ ತೀರದ ಒಂದು ಊರಾದ್ದರಿಂದ ಮರಾಟಿಯು ಪ್ರಮುಖ ಬಾಷೆ  ಆದರೂ ಕೂಡ ಇಲ್ಲಿನ ಜನ ಹಿಂದಿ ಬಾಷೆಯಲ್ಲಿ ಕೂಡ ಮಾತನಾಡುತ್ತಾರೆ. 

ಸರಿ. ಹೊರಡುವ ಎಲ್ಲ ತಯಾರಿಗಳು ಶುರುವಾಗಿ, ಮೀಟಿಂಗ್ ರೂಂನಲ್ಲಿ ಗಂಟೆ-ಗಂಟೆಗಟ್ಟಲೆ  ಕಾರ್ಯತಂತ್ರಗಳು, ಪ್ರವಾಸಕ್ಕೆ ಫ್ಲೋ ಚಾರ್ಟ್ (flow chart) ಕೂಡ ತಯಾರಾಯಿತು. ಬಹುಶ: ಸಣ್ಣ ಕಾರ್ಯವನ್ನು ದೊಡ್ಡದಾಗಿ ಮಾಡುವ ಕಾರ್ಪೊರೇಟ್ ಶೈಲಿಯು ನಮಗೆ ಒಳ್ಳೆಯ ಟೈಂಪಾಸ್ ಮಾಡಿಸಿದವು. 

ಸರಿ ಹೊರಡುವದಿನ ಬಂದೇ ಬಿಟ್ಟಿತು, ನಿಗದಿಯಾದಂತೆ  ಬೆಳಗಿನ 7 ಗಂಟೆಗೆ ಎಲ್ಲರು ಗೇಟ್ ವೇ ಆಫ್ ಇಂಡಿಯಾದಲ್ಲಿ ಸೇರಿ,8 ಗಂಟೆಗೆ AC ಇರುವ ದೋಣಿ ಹತ್ತಿದೆವು, ಮೇಲಿನ ಮಹಡಿಯಲ್ಲಿ ನಿಗದಿಯಾಗಿದ್ದ ಆಸನಗಳು ಆರಾಮದಾಯಕವಾಗಿದ್ದವು. ಬಹುಶ: ಪ್ರತಿಯೊಂದು ಜಾಗದಲ್ಲಿ AC ಬೇಕು ಅನ್ನುವುದು, ಮಾಹಿತಿ ತಂತ್ರಜ್ನರ ಒಣ ಪ್ರತಿಷ್ಠೆಯೇ ?  ಅಥವಾ ಮೀನಿನ ಜೀವನವೇ ? ಸರಿ ಒಣ ಪುರಾಣವನ್ನು ಬದಿಗಿಟ್ಟು ಪ್ರವಾಸ ಮುಂದುವರೆಸೋಣ.ಗೇಟ್ ವೇ ಆಫ್ ಇಂಡಿಯ ದಿಂದ ಮಾಂಡವ ಜೆಟ್ಟಿಗೆ ಸುಮಾರು ಒಂದು ತಾಸಿನ ಸಮುದ್ರಯಾನ. ಅರಬ್ಬೀ ಸಮುದ್ರವು ಶಾಂತವಾಗಿದ್ದ ಕಾರಣ ಹೆಚ್ಚಿನ ಅಲೆಗಳ ಏರಿಳಿತವಿರಲಿಲ್ಲ ಸುಮಾರು 11 ಗಂಟೆಗೇ ಮಾಂಡವ ಜೆಟ್ಟಿ ತಲುಪಿ ಅಲ್ಲಿಂದ ಟಂ ಟಂ ಆಟೋ ಹತ್ತಿ ಅಲಿಬಾಗ್ ತಲುಪಿದೆವು. ಮಾಂಡವ ಜೆಟ್ಟಿಯಿಂದ ಅಲಿಬಾಗ್ ಗೆ 400/- ರೂಗಳ ಆಟೋದರವಿದೆ. 

 

ನಮ್ಮ ಹೋಂಸ್ಟೇ ತಲುಪಿ ಮತ್ತೆ ತಯಾರಾದ ನಂತರ ಅಲ್ಲೇ ಹತ್ತಿರವಿದ್ದ ವರ್ಸೋಲಿ ಸಮುದ್ರತೀರ ನೋಡಲು ಹೋದೆವು, ಅಲ್ಲಿ ಅಲೆಗಳ ಅಬ್ಬರನೋಡಿ ನಾನ೦ತೂ ಅಚ್ಚರಿಗೊಂಡೆನು. ಸಮುದ್ರದ ಏರಿಳಿತ ಚಂದ್ರನ ಹಾಗು ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೊಂದಿರುವ ಸಂಬಂದ ನಿಜಕ್ಕೂ ವಿಸ್ಮಯಕಾರಿ.  ಸಮುದ್ರವು ಏರುತ್ತಿದ್ದ ಕಾರಣ ದೂರದಿಂದಲೇ ನೋಡಿ ವಾಪಸಾದೆವು.
ಬೆಳಗ್ಗೆಯಿಂದ ಸರಿಯಾಗಿ ತಿಂಡಿ ತಿನ್ನದ ಕಾರಣ ಹೊಟ್ಟೆ ಚುರುಗುಡುತಿತ್ತು, ಹೋಂಸ್ಟೇಯಲ್ಲಿ ಏಕಾದಶಿಯಾದ ಕಾರಣ ಮಾಂಸಾಹಾರ ಅಡಿಗೆಯಿರಲಿಲ್ಲ, ಸರಿ ಏಕಾದಶಿಯೆಂದು ಸುಮ್ಮನಿರಲಾದಿತೆ ? ಹತ್ತಿರದ ಹೋಟೆಲ್ ನ ನಂಬರ್ ಹುಡುಕಿ, ಮೂವರಿಗೆ ಮೀನಿನ ಊಟವನ್ನು ಆರ್ಡರ್ ಮಾಡಿಯಾಯಿತು, ಮಾಂಸ ತಿನ್ನುವ ಮನಸಿದ್ದರೂ ಏಕಾದಶಿಯ ಹೆದರಿಕೆಯಿಂದಲೋ ಅಥವ ಸಂಸ್ಕಾರ(?)ದಿಂದ ಸಸ್ಯಾಹಾರಿ ಊಟವನ್ನು ಉಳಿದ ಮೂವರು ಅಲ್ಲೇ ಮಾಡಿದರು. 

ಸಂಜೆ ಮತ್ತೆ ಸಮುದ್ರ ತಲುಪಿದ ನಾವು ಕೆಲಸ, ಪ್ರಾಜೆಕ್ಟ್ , ಡೆಡ್ಲೈನ್ ಎಲ್ಲಾ ಮರೆತು, ನೀರಿನಲ್ಲಿ ಬಿದ್ದು ಹೊರಳಾಡಿದೆವು. ಇರುವುದರಲ್ಲಿ ವರ್ಸೋಲಿ ಬೀಚ್ನಲ್ಲಿ ಜನ-ಜಂಗುಳಿಯಿಲ್ಲ ಹಾಗೂ ಅಂಗಡಿಗಳ ಕಾಟವಿಲ್ಲ. ಇರುವುದು ಎರಡೇ ಅಂಗಡಿ ಒಂದು ಗೋಲ ಮಾರುವ ಮತ್ತೊಂದು ತಿಂಡಿಯ ಸಣ್ಣ ತಳ್ಳುಗಾಡಿ. 

ಸಮುದ್ರದ ನೀರು ಮತ್ತು ಮರಳು ನಮ್ಮ ದೇಹ ಮತ್ತು ಬಟ್ಟೆಗಳೆರಡನ್ನು ತೋಯಿಸಿ, ನಮ್ಮ ಅಹಂಕಾರವನ್ನು ಕೂಡ ಮರೆಸಿದ್ದವು. ಸೂರ್ಯ ಮುಳುಗುವತನಕ ನೀರಿನಲ್ಲಿ ಆಟ ಆಡಿ ದಣಿದ ಬಳಿಕ ನಾವು ಹೋಂಸ್ಟೇಗೆ ಮರಳಿದೆವು



ಹೋಟೆಲ್ ಗೆ ಮರಳಿದ ಬಳಿಕ ಸಂಜೆಗೆ ರಂಗು ಬಂದಿತು! ಏಕಾದಶಿಯ ಕಾರಣ ಸಂಜೆಯ ರಂಗಿನ ಜೊತೆಯಾಗಲು ಮತ್ತೆ ಹೋಟೆಲ್ ನಿಂದಲೇ ಆರ್ಡರ್ ಮಾಡಬೇಕಾಯಿತು, ಮದ್ಯಾನ್ಹದ ಸಸ್ಯಾಹಾರಿಗಳು ಸಂಜೆಗೆ ಮತ್ತೆ ಮಾಂಸಹಾರಿ ಗಳಾಗಿದ್ದರು. ಸಂಜೆಯ ರಂಗು ರಾತ್ರಿಯ ಬಹು ಹೊತ್ತಿನವರೆಗೂ ನಡೆಯಿತು ಮಧ್ಯೆ ಮದ್ಯದ ಜೊತೆಗೆ ಊಟ. ರಾತ್ರಿ ಬಹು ಹೊತ್ತಿನವರೆಗೂ ಮಾತು- ಹಾಸ್ಯ, ಕೀಟಲೆ ಹಾಗೂ ಕಾಳೆಯುವ ಚಟಾಕಿಗಳು ನಡೆದವು. ಎಲ್ಲರೂ ತಣ್ಣಗಾಗಿ ಮಲಗಿದಾಗ ಬೆಳಗಿನ ಜಾವ 3 ಗಂಟೆ. 

ಬೆಳಿಗ್ಗೆ ಎದ್ದು ತಿಂಡಿ ತಿಂದು, ಮತ್ತೆ ಸಮುದ್ರ ದರ್ಶನ ಮಾಡಿ ಬಂದೆವು, ಅದೇನೋ ಸೆಳೆತ ಸಮುದ್ರವೆಂದರೆ,  ಇರುವುದೆಲ್ಲವ ಬಿಟ್ಟುಇರದುದರೆಡೆಗೆ ತುಡಿವುದೇ ಜೀವನ. ಎಲ್ಲ ಇದ್ದರು ಬೇರೇನೋ ಬೇಕು ಅನ್ನುವ ಹಂಬಲವೆ ನಮ್ಮ ಉನ್ನತಿಗೆ ಸಾಧನವೇ?

ಮೀನಿನ ಊಟ ಮಾಡಿ ಹೋಂಸ್ಟೇಯ ಮಾಲಿಕರಿಗೆ ಅವರ ಉಪಚಾರ ಪ್ರೀತಿಗೆ ಧನ್ಯವಾದ ಹೇಳಿ ಮತ್ತೆ ದೋಣಿಯಿಂದ ಮುಂಬೈ ತಲುಪಿದೆವು. ಮನದಲ್ಲಿ ನಾಳೆ ಆಫೀಸ್ಗೆ ಹೋಗ ಬೇಕು ಎನ್ನುವ ಚಿಂತೆಯೇ ತುಂಬಿ ರಾತ್ರಿ ಊಟ ಸೇರದೆ ಮಲಗಿದ್ದಾಯ್ತು. 

ಮತ್ತೆ ಮುಂದಿನ ಪ್ರವಾಸದ ನಕ್ಷೆ ತಯಾರು ಮಾಡುವ ಯೋಚನೆಯಲ್ಲಿ ನಾವೀಗ ಇದ್ದೆವೆ. 

ಮುಂದಿನ ಲೇಖನದವರೆಗೆ ನಮಸ್ಕಾರ :)




 

Wednesday, June 18, 2014


ಮನದ ಹಿಂದೆ

ಮೊನ್ನೆ ನನ್ನ ಮ್ಯಾನೇಜರ್ನಿಂದ ಮನೆಯಿಂದ ಕೆಲಸದ  (ವರ್ಕ್ ಫ್ರಮ್ ಹೋಂ) ಅನುಮತಿ ಪಡೆದು ನನ್ನ ಊರಿಗೆ ಹೊರಡಲು ಅನುವಾದೆ. 
ನವರಂಗ್ ಬಸ್ ಸ್ಟಾಪ್ನಿಂದ ಹಾಸನದ ಕಡೆಗೆ ಹೊರಡುವ ಸಾಮಾನ್ಯ ಸಾರಿಗೆ ಬಸ್ ಹತ್ತಿ ಕುಳಿತೆ. ಬಸ್ ಯಶವಂತಪುರ ದಾಟಿ ಮೇಲ್ಸೇತುವೆಯ ಕೆಳಗಿಂದ ಪೀಣ್ಯ ಜಾಲಹಳ್ಳಿ ತಲುಪಿತು. ನೀರಿನ ಬಾಟಲಿ  ಮತ್ತು ಮಜ್ಜಿಗೆ ಮಾರುವವರ ಕೂಗು ನನಗೆ ನನ್ನ ನಿದ್ದೆಯ ಮ೦ಪರನ್ನು ಹೊಡಿಸಿತು.; ಯಾವುದೊ ಹೆಸರಿನ ನೀರಿನ ಬಾಟಲಿ  ಮತ್ತು ಮಜ್ಜಿಗೆ ಪ್ಯಾಕೆಟ್ಗಳನ್ನೂ ನೋಡಿ ಕೊಳ್ಳುವ ಮನಸಾಗಲಿಲ್ಲ. 
 
ಸರಿ ಬಸ್ಸು ಮುಂದಕ್ಕೆ ಚಲಿಸಲು ಅಲ್ಲ ಓಡಲು ಶುರು ಮಾಡಿತು. ಕನ್ನಡದ ಯಾವುದೊ ಬ್ಲಾಗಿನಲ್ಲಿ ಓದಿದ  ನಕ್ಸಲ್ ಚಳುವಳಿ ಮತ್ತು ಸಾಕೆತ್ ರಾಜನ ಎನ್ಕೌಂಟರ್ ನನ್ನ ಮನಸಿನಲ್ಲಿ ಕೊರೆಯಲು ಶುರು ಮಾಡಿತು.  
ನಕ್ಸಲರು ಮತ್ತು ನಕ್ಸಲ್ ಚಳುವಳಿಯ ಹಿಂದೆ ಇರಬಹುದಾದ ವ್ಯಗ್ರ ಮತ್ತು ರೋಸಿದ ಮನಸ್ಥಿತಿ ಹಿಂದೆ ಇರಬಹುದಾದ ಕಾರಣಗಳು ಒಂದರ ಹಿಂದೆ ಬಂದವು. 
ದುಡಿಯುವ ಕೈಗಳಿಗೆ ಮಾಡಿದ  ಮೊಸವೋ? ಅಥವಾ ತಮ್ಮ ಜಮೀನು-ಮನೆ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾದ ಕೋಪವೋ ? ಖಾಕಿ ದೌರ್ಜನ್ಯವೋ? ಕೆಲಸ ಕೊಡದೇ ವಂಚಿಸಿದ ಬ್ರಷ್ಟ ವ್ಯವಸ್ಥೆಯೂ,  ಲೆನಿನ್ ಕಾಲ್ ಮಾರ್ಕ್ಸ್ನ ನ ಸಿದ್ದಾಂತದ ಪ್ರಬಾವವೋ ಅಥವಾ ಮೈಮುರಿದು ತಿನ್ನಲಾಗದ ಸೋಮಾರಿತನವೋ ಅಥವ ಎಲ್ಲವೋ ?

೨ ವರ್ಷಗಳ ಹಿಂದೆ ಮುಂಬೈನಲ್ಲಿ  ನೋಡಿದ 'ರೆಡ್ ಅಲರ್ಟ್' ಚಿತ್ರ ನೆನಪಾಯಿತು. ಬಹುಶ  ಬಾಕ್ಸ್ ಆಫೀಸ್ನಲ್ಲಿ ಸೋತ ಇ ಚಿತ್ರವು ಎಲ್ಲರನ್ನು ತಲುಪಿದ ಬಗ್ಗೆ ಖಾತರಿಯಿಲ್ಲ.  ಕರ್ನಾಟಕ ಮೂಲದ ಸುನಿಲ್ ಶೆಟ್ಟಿ ನಟಿಸಿರುವ 'ರೆಡ್ ಅಲರ್ಟ್'  ಚಿತ್ರವು ನಕ್ಸಲರ ಬಗ್ಗೆ, ಅವರ ಹೋರಾಟದ ಬಗ್ಗೆ ಹಾಗೂ ನಗರದ ಬುದ್ದಿಜೀವಿಗಳ ಸೋಗಲಾಡಿತನ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ನಕ್ಸಲಿಸಂ ಬಗ್ಗೆ ಯೋಚಿಸುತ್ತಿದ ಹಾಗೆ ಬಸ್ಸು ಉಪಹಾರ ಸೇವನೆಗೆ ರಸ್ತೆ ಬದಿಯ ಹೋಟೆಲೊಂದರಲ್ಲಿ ನಿಂತಿತು. 

ಮಧ್ಯಾನ್ನ ತಿಂದ ಊಟ ಎಂದೋ ಮಾಯವಾಗಿತ್ತು. ಸರಿ ಹೋಟೆಲ್ಗೆ  ಹೊಕ್ಕ ಬಳಿಕ ತಿಂಡಿ ಪತ್ರ (ಮೆನು ಕಾರ್ಡ್ ಗೆ ಸಮನಾರ್ಥಕ  ಪದವೇ?) ನೋಡಿ ರೋಟಿ -ಕರಿ  ಹೇಳಿದ್ದಾಯ್ತು. ೨ ಒಣಗಿದ ಮತ್ತು ಸೀದು ಹೋದ ರೋಟಿ ಮತ್ತು ನೀರ್ ದಾಲ್  ಬಂತು, ಕಷ್ಟಪಟ್ಟು ಹೇಗೋ ಗೊಣಗಿ ತಿಂದದ್ದಾಯ್ತು. ಬೆಲೆ ಕೇವಲ 50 ರೂಪಾಯಿಗಳು. 
ಒಬ್ಬ ಬಡವ ಒಂದು ದಿನದಲ್ಲಿ ಕೇವಲ 32 ರೂ ನಲ್ಲಿ ಬದುಕಬಹುದು ಎಂದ ಕಳೆದ ಕೇಂದ್ರ ಸರಕಾರದ ಹೇಳಿದ ವಾಕ್ಯ  ನೆನಪಿಗೆ ಬಂತು. ಇಂತ ಹಾಸ್ಯ ಮಾಡಿದ ವ್ಯಕ್ತಿಯ ಬಗ್ಗೆ ನಕ್ಕು ನಾನು ಕುಳಿತಿದ್ದ ಸೀಟ್ ನಲ್ಲಿ ಕುಳಿತೆ. 

ಬಸ್ಸು ಬೆಳ್ಳೂರುಕ್ರಾಸ್ ನ್ನು ದಾಟಿ ಮಂಡ್ಯ ಜಿಲ್ಲೆಗೆ ವಂದನೆ ಹೇಳಿ ಹಾಸನ ಜಿಲ್ಲೆಯ ಗಡಿಯನ್ನು ಪಾರುಮಾಡಿ ಹೆಸರಾಂತ  ಊರಾದ ನನ್ನ ಹಿರಿಸಾವೆಯನ್ನು ತಲುಪಿತು. ನಕ್ಸಲಿಸಂ ಯೋಚನೆ ಬಗ್ಗೆ ಬ್ರೇಕ್ ಹಾಕಿ ನನ್ನ ಹೆಣವನ್ನು ಕೆಳಕ್ಕೆ ಇಳಿಸಿದೆ. 
ಎಲ್ಲಿಗೆ ಹೋದರು ನಾನು ಹೊತೊಯಲ್ಲೇ ಬೇಕಾದ ಲ್ಯಾಪ್ಟಾಪ್ ನನ್ನ ಪಾಲಿಗೆ ಹೆಣವೆ ಹೌದು. 

ತೋಟ -ಹೊಲ ನೋಡಿಕೊಂಡು ಅಲ್ಲಿಯೇ ಬದುಕ ಬೇಕು ಎನ್ನುವ ನನ್ನ ಆಸೆಯು ಎಂದು ನಿಜವಾಗುವುದೋ ಗೊತ್ತಿಲ್ಲ. 

ಮನೆ ತಲುಪಿ, ಚಿನ್ನುವನ್ನು ( ಚಿನ್ನು-ನಾಲ್ಕು ಕಾಲಿನ ಬೊಗಳುವ ಪ್ರಾಣಿ )ಮುದ್ದಿಸಿ , ಎಲ್ಲರೊಡನೆ ಮಾತಾಡುತ್ತ ಉಂಡ ನಾಟಿ ಕೋಳಿ ಸಾರು ಮತ್ತು ಮುದ್ದೆ ನನ್ನ ಎಲ್ಲ ಹಸಿವನ್ನು ನೀಗಿತ್ತು. 

 ಮಾರನೆಯ ದಿನದಿಂದ ಎಂದಿನಂತೆ ನನ್ನ ಕೆಲಸ ಸಾಗಿತ್ತು, BSNL ಬ್ರಾಡ್ಬಾಂಡ್ ಕೈ ಕೊಡದೆ ನನ್ನ ಕೆಲಸ ನಡೆಯುತ್ತಿತ್ತು. ಮನೆಯ ಊಟ -ತಿಂಡಿ ನನ್ನ ತೂಕಕ್ಕೆ ಮತ್ತೆರಡು ಕೇಜಿ ತೂಕ ಸೇರಿಸುತ್ತಿದ್ದವು. ಹೊಟ್ಟೆ ಸಮೃದ್ಧಿಯ ಸಂಕೇತ ಎಂದು ಎಲ್ಲರಿಗೂ ಹೇಳಿ ಅವರ ವ್ಯಾಯಾಮದ ಉಪದೇಶವನ್ನು  ನಿಲ್ಲಿಸುತ್ತಿದ್ದೆ!

ಒಂದು ದಿನ ಅಪರಾನ್ಹ, ಚಿನ್ನು ಕರೆದ ಕೂಗಿಗೆ ಬಾಗಿಲು ತೆರೆದಾಗ, ಗ್ಯಾಸ್ ಕಂಪನಿಯವರು ಎಂದು ಹೇಳಿ ಕೊಂಡ ಯುವಕ ನಿಂತಿದ್ದ. ನೋಡಲು ವಿದ್ಯಾವ೦ತನಂತೆ ಕಾಣುತಿದ್ದ ಅವನನ್ನು ವಿಚಾರಿಸಿದಾಗ ಗ್ಯಾಸ್ ಪರಿಶೀಲನೆ ಬಂದಿರುವುದಾಗಿ ತಿಳಿಸಿದ. 
ಬೃಹತ್ ಬೆಂಗಳೂರಿನಲ್ಲಿ ಎಂದು ಬರದೆ ಇದ್ದ ಪರಿಶಿಲಕರು ಗ್ರಾಮೀಣಭಾಗದಲ್ಲಿ ಬಂದಿರುವುದು ತಿಳಿದು ಆಶ್ಚರ್ಯ ಹಾಗು ಹೆಮ್ಮೆ ಕೂಡ ಆಯಿತು. ಎಂದಿನಿಂದ ಗ್ರಾಹಕ ಪ್ರಭುವಾದ? ಎಂದು ಮನಸ್ಸು ಮತ್ತೆ ಓಡಲು ಶುರು ಮಾಡಿತು. ಮನಸ್ಸಿಗೆ ಚಿಕ್ಕ ವಿರಾಮ ಕೊಟ್ಟು, ಯುವಕನ ಕಡೆ ಗಮನ ಕೊಟ್ಟೆ. 
ಹೊರಗಡೆಯೇ ನಿಲ್ಲಿಸಿ ಕೇಳಿದಾಗ, ಗೃಹಬಳಕೆಯ ಸಂಪರ್ಕವನ್ನು ಪರಿಶೀಲನೆ ಮಾಡುವುದು ಕಡ್ಡಾಯವೆಂದು ಹಾಗೆ ಮಾಡಲಿಲ್ಲ ಎಂದರೆ ಪ್ರತಿ ತಿಂಗಳು ಸಿಲಿಂಡರ್ ಕೊಡುವುದಿಲ್ಲ ಎಂದು ಹೇಳಿದ. ಹಾಗು ಪರಿಶೀಲನೆ ಶುಲ್ಕವೆಂದು ಕೇವಲ 75/- ರೂ ಗಳನ್ನೂ ಕೊಡಬೇಕು ಎಂದು ಹೇಳಿದ. ಗ್ರಾಹಕ ಪ್ರಭುವಿನ ಯೋಚನೆ ನನ್ನ ಮನಸಿನಲ್ಲಿ ಟುಸ್ಸ್ ಆಯಿತು. 

ಆ ಯುವಕನ ಕೈಲಿದ್ದ ಪರಿಶಿಲನ ಪತ್ರ (checklist ) ನೋಡಲಾಗಿ ಎಲ್ಲ ಪ್ರಶ್ನೆಗಳಿಗೂ ಆಗಲೇ ಸರಿ/ಹೌದು ಎಂದು ಗುರುತು ಮಾಡಿಯಾಗಿತ್ತು: ಬಹುಶ ಅತೀಂದ್ರಿಯ ಶಕ್ತಿ ಇರಬಹುದು, ಕೇವಲ ಮನೆ ನೋಡಿದ ಕೂಡಲೇ ಗೊತ್ತಗಬಹುದೇನೋ? ಅಲ್ಲವೇ 
 ಅವನನ್ನು ಮನೆಯ ಒಳಕ್ಕೆ ಕರೆದು ಅಡಿಗೆ ಮನೆಯಲ್ಲಿ ಉಪಕರಣ ತೋರಿಸಿದಾಗ ಎಲ್ಲ ಸರಿಯಿದೆ ಎಂದ.
ಸಿಲಿಂಡರ್ ಹಾಗು ಸ್ಟವ್ ನೋಡಿದ ತಕ್ಷಣ ಗೊತ್ತಾಗುವ ಹಾಗೆ ತರಬೇತಿ ಕೊಟ್ಟಿರುವ ಸಂಸ್ಥೆ ಧನ್ಯೋಸ್ಮಿ . 

ಅವನ ಕೈಗೆ  75/-ರು ಕೊಟ್ಟು ಅವನು ಕೊಟ್ಟ ಪತ್ರ ತೆಗೆದುಕೊಂಡೆ. ಅವನ ಸಂಸ್ಥೆಯೊಡನೆ ವಿಚಾರಿಸುವ ಎಂಬ ನನ್ನ ಯೋಚನೆಯನ್ನು ಮನೆಯ ಎಲ್ಲ ಸದಸ್ಯರು ಸುಮ್ಮನಿರು 75/- ರುಪಾಯಿಗೆ ಏಕೆ ಜಗಳ -ಮನಸ್ತಾಪ  ಎಂದು ಹೇಳಿದರು. 

ಭಾರತದಲ್ಲಿ ಪ್ರಶ್ನಿಸುವ ಮನೊಭಾವವನ್ನೇ ಚಿಗುಟುವ, ಗ್ರಾಹಕ ಹಕ್ಕುಗಳಿಗೆ ಮೋಸ ಮಾಡುವ ಹಾಗು ಪ್ರಶ್ನೆ ಮಾಡಿದ್ದವರನ್ನೇ ಗುರಿಯಾಗಿಸಿ ತೊಂದರೆ ಕೊಡುವ ವ್ಯವಸ್ಥೆಯು ನಕ್ಸಲ್ ವಾದದಿಂದ ಸರಿಯಾಗ ಬಹುದೇ? ಕಾಲ್-ಮಾರ್ಕ್ಸ್ ನೆ ಉತ್ತರ ಕೊಡಬೇಕು. 

ಆಫೀಸ್ ನಿಂದ ಬಂದ ಕರೆಯಿಂದಾಗಿ , ಎಲ್ಲವನ್ನು ಬಿಟ್ಟು ಲ್ಯಾಪ್ಟಾಪ್ ಮುಂದೆ ಕುಳಿತೆ, ನಂತರದ ವಿರಾಮದಲ್ಲಿ ನನ್ನ ಕಾಡುವ ಯೋಚನೆಗಳನ್ನೂ ನಿಮಗೆ ದಾಟಿಸಿದ್ದೇನೆ.  ಕ್ಷಮೆಯಿರಲಿ








ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...