Monday, February 15, 2021

ಫೇಬ್ರ ವರಿ ಯಸ್ 

 


ಬೆಳ -ಬೆಳಗ್ಗೆ ಮನೆ ಮುಂದಿನ ರಸ್ತೆಯಲ್ಲಿ ಗುಲಾಬಿ ಹೂವು ಗುಲಾಬಿ ಹೂವು ಎಂದು ಒಬ್ಬರು ಟಿವಿಎಸ್ ಮೊಪೆಡ್ ನಲ್ಲಿ ಕೂಗಿ ಹೋಗುತಿದ್ದರು. ಅಂದು ಭಾನುವಾರವಾದ್ದರಿಂದ ಬೇಗ ಎದ್ದು ಮಾಡುವುದಕ್ಕೆ ಏನು ಕೆಲಸವಿರಲಿಲ್ಲ. ನಿಮ್ಮಂತ ಓದುಗರಿಗೇನೋ ಅಂದು ಬೇಗ ಹೇಳಲು ಕಾರಣವಿರುತ್ತದೆ !. ಎಂದೂ ಸ್ನಾನ ಮಾಡದಿದ್ದ ಹುಡುಗರು ಸಹ ಅಂದು ಬೇಗ ಎದ್ದು ಎಲ್ಲವನ್ನು ತೊಳೆದುಕೊಂಡು ಮೈಗೆ ಡಿಯೋಡರೆಂಟು ( ದುರ್ಗಂಧ ನಾಶಕ) ವನ್ನು ಸಿಂಪಡಸಿಕೊಂಡು ತಮಗೆ ಬೇಕಾದವರನ್ನು ಭೇಟಿ ಮಾಡಲು ಜೊತೆಗೆ ಉಡುಗೊರೆ ಕೊಡಲು ಕಾರಣವಿರುತ್ತದೆ. 

ಮನೆ ಮುಂದೆ ಬಂದು ನಿಂತ ಹೂವಿನವನು " ಯೋ ನಿಮ್ಮ ಬೀದಿಯ ಹುಡುಗರೆಲ್ಲಾ ನನ್ನ ಬಳಿ ವ್ಯಾಪಾರ ಮಾಡಿದ್ದಾರೆ ನೀನು ಒಬ್ಬನೇ ಮಾಡಿಲ್ಲ. ಬಾ ಬೇಗ ಹೊರಗೆ. ಬಂದು ಬಂದು  ಹಳದಿ ಗುಲಾಬಿನೋ, ಕೆಂಪು ಗುಲಾಬಿನಾದ್ರು ತಗೋ ಅಂದ . 
ನಾನು ಹೊರಗಡೆ ಬಂದು ನನಗೆ ಗುಲಾಬಿ ಬೇಡ ಅಣ್ಣ, ನಾವು ದೇವರಿಗೆ ಗುಲಾಬಿ ಮುಡಿಸುವುದಿಲ್ಲ ಅಂದೇ ಅದಕ್ಕೆ ಅವನು ಅಯ್ಯೋ ಗೂಬೆ ಮುಂಡೇದೆ ಇವತ್ತು ಅದೇನೋ ಅಂತಾರಲ್ಲ ವಾಲೆ ಟಿನ್ ಡೇ ಅಂತ ಅದು ಅದಕೋಸ್ಕರ ಎಲ್ಲಾ ಗುಲಾಬಿ ತೆಗೆದುಕೊಳ್ಳುತ್ತಿದ್ದಾರೆ. ನೀನು ತಗೋ ಅಂದ ಅದಕ್ಕೆ ನಾನು ನಮಗ್ಯಾರು ಬೀಳ್ತಾರೆ ಗುರು. ನಾವು ಏನಿದ್ದರೂ ಸೈಡ್ ರೋಲ್ ಅಷ್ಟೇ ಅಂದೇ ಅದಕ್ಕೆ ಅವನು ಬೇಜಾರಾಗಿ ಹೋಗ್ಲಿ ತಗೋ ಈ ಗುಲಾಬಿನ ಫ್ರೀ ಆಗಿ ಇಟ್ಕೋ ಯಾರೂ ಸಿಗಲಿಲ್ಲ ಅಂದ್ರೆ ಕಿವಿ ಮೇಲೆ ಇಟ್ಕೋ ಅಂತ ಹೇಳಿ ಒಂದು ನೇರಳೆ ಗುಲಾಬಿ ಕೊಟ್ಟ. 

ಲೈಫ್ ಇಷ್ಟೇನೆ ಅಂದುಕೊಂಡು ಹಲ್ಲುಜ್ಜದೆ ತಿಂಡಿ ತಿಂದೆ, ಬಾಯಲ್ಲಿರುವ ಬ್ಯಾಕ್ಟೀರಿಯಗಳು ಹೊಟ್ಟೆಗೆ ಸೇರಿ ಬೇಗ ಜೀವ ಹೋಗಲಿ ಎಂದು. ನಂತರ ಮೊಬೈಲ್ ನೋಡಿದರೆ ಒಬ್ಬರಿಂದ ಹಲವು ಮೆಸೇಜ್ಗಳು.  ತೆಗೆದು ನೋಡಿದರೆ ನಿಮ್ಮ ವ್ಯಾಲೆಂಟೈನ್ಡೇ ಅನ್ನು  ವಿಶೇಷವಾಗಿಸಿ ಇದರ ನೆನಪಿನಲ್ಲಿ ಒಂದು ಫ್ಲಾಟ್ ಬುಕ್ ಮಾಡಿ ಮತ್ತು ಪಡೆಯಿರಿ ರೂ 5000/- ಡಿಸ್ಕೌಂಟ್. ಇವನ ಅಜ್ಜಿ  ಸುಮ್ನೆ ಮೂರು ಅಡಿ ಮತ್ತು ಆರು ಅಡಿ ಫ್ಲಾಟ್ ಕೊಡ್ರುಲಾ ಅಂತ ಅಂದುಕೊಂಡು ಮೆಸೇಜ್ ಡಿಲೀಟ್ ಮಾಡಿದೆ. 

ಆಗ ನೆನಪಿಗೆ ಬಂದಿದ್ದು ಕೆಳಗಿನ ಜೋಕು ಗಳು, ನೀವು ನಕ್ಕು ನಲಿಯಲಿ ಎಂದು  ಕೆಳಗೆ ಕಾಪಿ + ಪೇಸ್ಟ್  ಮಾಡಿದ್ದೇನೆ.  


👉ತಿಮ್ಮ : ಆಂಟಿ ನಿಮ್ಮ ಮಗ ಗುಂಡ ಯಾವುದೋ ಹುಡುಗಿಗೆ TeddyBear Gift ಕೊಟ್ಟ

ಗುಂಡ ನ ಅಮ್ಮ : ಅಯ್ಯೊ ಹೋಗೋ ಮುಠ್ಠಾಳ ಅವನಿಗೆ ಚಡ್ಡಿ ಹಾಕೋಕೆ ದುಡ್ಡಿಲ್ಲ ಇನ್ನು ಟೆಡ್ಡಿಬಿಯರ್ ಎಲ್ಲಿಂದ ಕೊಡ್ತಾನೆ... 😝😝


                                   💭💭💭💭💭💭💭💭


👉ಇವತ್ತು ಫೆಬ್ರವರಿ 14 ಬಂದೇ ಬಿಡ್ತಲ್ಲಾ ..
ನಮಗೆ ಯಾರು ಬೀಳ್ತಾರೆ ..🤔
ನಮಗೆ ಯಾರೂ ಬಿದ್ದಿಲ್ಲ ... 😔
ಇನ್ನೂ ಯಾರೂ ಬಿದ್ದಿಲ್ಲ ಅಂತ ಫೀಲ್ ಮಾಡ್ಕೋಬೇಡಿ 😎

ಮೊದಲು ಹುಡುಗಿ ಸಿಲೆಕ್ಟ್ ಮಾಡಿಕೊಳ್ಳಿ ಅವಳು ಬರೋ ದಾರಿಲಿ #ಬಾಳೆಹಣ್ಣಿನ ಸಿಪ್ಪೆ ಎಸೆಯಿರಿ ...🍌

ಪಕ್ಕಾ ಬಿದ್ದೇ ಬೀಳ್ತಾಳೆ ... 😍😍😍 


                   ✂✂✂✂✂✂✂✂✂✂✂✂✂✂✂✂✂✂✂✂✂✂✂✂✂✂✂


ಪಾರ್ಕಲ್ಲಿ ಲವ್ವರ್ಸ್ ಹುಡುಗಿ ತಂದೆ ಕೈಯಲ್ಲಿ ಸಿಕಾಕೊಂಡ್ರು 

ಹುಡುಗಿ ತಂದೆ : ಎಷ್ಟು ಇಂಕಮ್ ಇದೆ ನಿನಗೆ ತಿಂಗಳಿಗೆ ..🤔

ಹುಡುಗ : 12000 

ಹುಡುಗಿ ತಂದೆ :  ನಾನು ನನ್ನ ಮಗಳಿಗೆ ಪಾಕೆಟ್ ಮನಿ ಅಂತ 10000 ಕೊಡ್ತೀನಿ 
ಬರೇ 12000 ಅಷ್ಟೇನಾ ಜಾಸ್ತಿ ಇಲ್ವಾ ?

ಹುಡುಗ : ನಾನು ಆ ಪಾಕೆಟ್ ಮನಿ ಸೇರಿಸೇ ಹೇಳಿದ್ದು ಸರ್ 🙊

                              ✔✔✔✔✔✔✔✔✔✔✔✔

ಕಾಲೇಜಲ್ಲಿದ್ದಾಗ ಒಬ್ಬಳ ಹತ್ರ ಮೊಬೈಲ್ no ಕೇಳಿದ್ದೆ..! ಅವಳು ಕೊಡಲಿಲ್ಲ..!!
ಈಗ ನೋಡಿದ್ರೆ ಅವಳ Phone no ಮನೆ ಹೊರಗಡೆ ಹಾಕಿದ್ದಾರೆ “ ಇಲ್ಲಿ ಸೀರೆಗಳಿಗೆ ಜಿಗ್ ಜಾಗ್ ಫಾಲ್ಸ್ ಹಾಕಲಾಗುವುದು ಸಂಪರ್ಕಿಸಿ ” ಅಂತ
😆😆🤦🏻‍♂️

       
         💜💜💜💜💜💜💜💜💜💜💜💜💜💜💜💜💜💜💜💜

ಇವತ್ತು ಯಾರಿಗಾದರೂ ಗುಲಾಬಿ ಕೊಡುವ ಮುನ್ನ ಕೆಳಗಿನ ಜೋಕನ್ನು ಗಂಭೀರವಾಗಿ ಓದಿ ನಂತರ ಗುಲಾಬಿ ಕೊಡಬೇಕೋ? ಅಥವಾ ತಮ್ಮ ಕಿವಿಯ ಮೇಲೆ ಇಟ್ಟುಕೊಳ್ಳುವುದೋ ನಿರ್ಧರಿಸಿ.

ಹೆಂಡತಿ : ನಿಮಗೆ ಯಾವಾಗಲೂ ನಾನೇ ಅಡುಗೆ ಮಾಡಿ ಹಾಕಬೇಕಾ? ಏನಾದರೂ ಕಾನೂನಿದ್ಯಾ?? 

ಗಂಡ : ಇದು ಜಗದ ನಿಯಮ. ಖೈದಿಗಳಿಗೆ ಊಟವನ್ನು ಸರ್ಕಾರವೇ ಕೊಡಬೇಕು ☺️


 

Saturday, January 30, 2021

ಮೊದಲ ಪ್ರಹಾರ 

 ಕಳೆದ ವಾರ ನಾನು ಬರೆದಿದ್ದ ಲೇಖನಕ್ಕೆ ಬಂದ ಪ್ರಶಂಸೆಗಳ ನಂತರ ನನ್ನ ಪ್ರೀತಿಯ ಓದುಗರಿಗೆ ಮತ್ತೆ ಇನ್ನೊಂದು ಲೇಖನ ಬರೆಯುವ ಮನಸಾಯ್ತು. ಒಬ್ಬರಂತೂ ನನ್ನ ಪದಗಳಿಂದ ಎಷ್ಟು ಪ್ರಭಾವಿತರಾದರೆಂದರೆ ಅದನ್ನು ವಿವರಿಸಲು ಬಾರಿ ಕಷ್ಟ ಪಟ್ಟರು ! ಹೀಗೆ ಹಲವರ ಮನಸ್ಸು ಘಾಸಿ ಗೊಳಿಸಿದ್ದಕ್ಕೋ ಏನೋ ನನ್ನ ಗಾಡಿಗೆ  ಮತ್ತೊಂದು ಗಾಡಿಗೆ ಡಿಕ್ಕಿಯೊಡೆದಿತ್ತು. 


ಎದುರಿನ ಗಾಡಿಯಲ್ಲಿ ಹೋಗುತಿದ್ದದು ಒಬ್ಬ ಯುವತಿ, ಗಾಡಿಯ ಎರಡು ಕಡೆಯಲ್ಲೂ ಕಾಲು ಇಳಿಬಿಟ್ಟು ಬ್ರೆಕ್ ನ ಜೊತೆ ಜೊತೆಗೆ ಕಾಲು ಉಪಯೋಗಿಸುತ್ತಿದ್ದ ಯುವತಿ ಒನ್ ವೇ ರಸ್ತೆಯಲ್ಲಿ ಬಂದು ನನಗೆ ಡಿಕ್ಕಿ ಒಡೆದಿದ್ದಳು. ಆಕ್ಸಿಡೆಂಟ್ ನ ತೀವ್ರತೆಗೆ ಯುವತಿಯ ತಲೆಗೆ ಪೆಟ್ಟಾಗಿ ರಕ್ತ ಹರಿದಿತ್ತು. ಹತ್ತಿರದ ಆಸ್ಪತ್ರೆಗೆ ಸೇರಿಸಿದೆ. 
ಸ್ವಲ್ಪ ಹೊತ್ತಿನ ಬಳಿಕ ಯುವತಿಯ ತಂದೆ ಮತ್ತು ತಾಯಿ ಬಂದು ತಮ್ಮ ಮುದ್ದಿನ ಮಗಳನ್ನು ನೋಡಿದ ಬಳಿಕ ಪಕ್ಕದಲ್ಲೇ ಇದ್ದ ನನ್ನನ್ನು ನೀವು ಯಾರು ? ಎಲ್ಲಿ ಅಪಘಾತವಾಯಿತು ಎಂದು ವಿಚಾರಿಸಿದರು.  ಯುವತಿಯ ತಾಯಿ ಧಾರವಾಡ ಶೈಲಿಯಲ್ಲಿ ಸೀರೆ ಧರಿಸಿದ್ದರೆ ತಂದೆಯವರು ಕಾವಿ ಧರಿಸಿ ಕೈಯಲ್ಲಿ ರುದ್ರಾಕ್ಷಿ ಮತ್ತು ಸಣ್ಣ ತ್ರಿಶೂಲ ಹಿಡಿದಿದ್ದರು. 
ನಾನು ಇದ್ದ ವಿಷಯವನ್ನು ಅವರಿಗೆ ಹೇಳಿದೆ. ವಿಷಯ ಕೇಳಿದ ನಂತರ ತಾಯಿ ಸೀರೆಯ ಸೆರಗಿನಿಂದ ಮುಖ ಮುಚ್ಚಿ ಅಳಲು ಶುರುಮಾಡಿದರೆ, ಯುವತಿಯ ತಂದೆಯ ಮುಖ ಕೆಂಪೇರಿತು. ಕಣ್ಣುಗಳು ಬೆಂಕಿಯುಂಡೆಯಾಗಿ ಕೈಯಲ್ಲಿದ್ದ ತ್ರಿಶೂಲವನ್ನು ಗಟ್ಟಿಯಾಗಿ ಹಿಡಿದು ನನ್ನನ್ನು ಕೆಕ್ಕರಿಸಿ ನೋಡುತಿದ್ದರು.  ನನಗೆ ಮನಸಿನಲ್ಲಿ ತಳಮಳ ಶುರುವಾಗಿತ್ತು.  ಗಂಟಲು ಒಣಗುತಿದ್ದರೂ ಸಾವರಿಸಿಕೊಂಡು ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಿಮ್ಮ ಮಗಳು ತಪ್ಪು ದಾರಿಯಲ್ಲಿ ಬಂದು ನನಗೆ ಗುದ್ದಿದಳು. ಬೇಕಿದ್ದರೆ ಸುತ್ತ ಮುತ್ತಲಿನ ಸಿ ಸಿ ಟಿ ವಿ ಕ್ಯಾಮೆರದ ರೆಕಾರ್ಡಿಂಗ್ ಅನ್ನು ನೋಡಿಅಂದೆ . 

ತಮ್ಮ ರುದ್ರಾಕ್ಶಿ ಮಣಿ ತೆಗೆದು, ಕೈಯಲ್ಲಿ ಹಿಡಿದು ನನಗೆ ಯಾವುದೇ  ಸಿ ಸಿ ಟಿ ವಿ ಕ್ಯಾಮೆರದ ಅವಶ್ಯಕತೆ ಇಲ್ಲ, ನನಗೆ ಪ್ರತಿಯೊಂದು ಇದರಿಂದಲೇ ಗೊತ್ತಾಗುತ್ತದೆ ಎಂದರು. ಹಾಗಿದ್ದರೆ ನನ್ನ ಮೇಲೇಕೆ ಆರೋಪ ಮಾಡುತ್ತಿರುವಿರಿ  ಎಂದೆ ?

ಯುವತಿಯರನ್ನು ಚುಡಾಯಿಸುವುದು ಹುಡುಗರ ದುರ್ಬುದ್ದಿ ಇದಕ್ಕೆ ತಕ್ಕ ಬೆಲೆ ನೀನು ಕಟ್ಟಬೇಕು ಅಂದರು.  ಅದಕ್ಕೆ ನಾನು ನನಗೆ ಸಣ್ಣ ಪುಟ್ಟ ಗಾಯ ಇದ್ದಾಗಲೂ ನಿಮ್ಮ ಮಗಳ ಪ್ರಾಣ ಮುಖ್ಯ ಎಂದು ಬಂದಿದ್ದೇನೆ. ತಾವು ಈ ರೀತಿ ಮಾತನಾಡಬಾರದು ಎಂದೆ . 

ಅವರು ನನ್ನನ್ನು ಸಿಟ್ಟಿನಿಂದ  ನೋಡಿ ನನ್ನ ಪ್ಯಾಂಟ್ ನ ಹರಿದ ಬಟ್ಟೆಯ ಚೂರೊಂದನ್ನು ಕಿತ್ತುಕೊಂಡು ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದರು. ಏನಾದರೂ ಮಾಡಿಕೊಳ್ಳಿ ಎಂದು ನಾನು ಮನೆಗೆ ಬಂದೆ. 

ಮನೆಗೆ ಬಂದು ಸ್ವಲ್ಪ ಹೊತ್ತಿನ ಬಳಿಕ ಯಾಕೋ ದೇಹಕ್ಕೆ ಸರಿಯಿಲ್ಲ ಎನಿಸಿತು. ದೇಹದ ತಾಪ ಹೆಚ್ಚಾಗಿ ಜ್ವರ ಬಂದಂತೆ ಅನ್ನಿಸತೊಡಗಿತು. ಸರಿ ಒಂದು ಜ್ವರದ ಮಾತ್ರೆಯನ್ನು ನುಂಗಿ ಮಲಗಿದರೆ ನಿದ್ದೆಯಲ್ಲಿ ಬರಿ ಅದೇ ದೃಶ್ಯಗಳು. 
ಗಾಡಿ ಗುದ್ದಿದ ಹಾಗೆ, ರಕ್ತ ಮತ್ತು ಆಸ್ಪತ್ರೆ . ತಡೆಯಲಾಗದೇ ಎದ್ದು ಕುಳಿತೆನು. ನೋಡಿದರೆ ಮೈಯೆಲ್ಲಾ ಬೆವೆತು ಹೋಗಿದೆ ಕಣ್ಣು ಬಿಟ್ಟರೆ ಯುವತಿಯ ಅಪ್ಪನ ಚಿತ್ರಗಳು.  

ತಡೆಯಲಾಗದೆ ಸ್ನೇಹಿತನಿಗೆ ಕರೆ ಮಾಡಿದೆ, ಅವನು ಬಂದೊಡನೇ ನನ್ನನ್ನು ನೋಡಿ ಏನಾಗಿದೆ ನಿನಗೆ ? ಇಂದು ಬೆಳಗ್ಗೆ ಚೆನ್ನಾಗಿದ್ದೇ ? ಏಕೆ ಏನಾಯಿತು ಅಂದ 

ನಾನು ಅವನಿಗೆ ಎಲ್ಲ ಕಥೆಯನ್ನೂ ಹೇಳಿ, ಬಹುಷಃ ಆ ಸನ್ಯಾಸಿ ನನ್ನ ಮೇಲೆ ಸೇಡು ತೀರಿಸಿ ಕೊಳ್ಳುತಿದ್ದಾನೆ ಅಂದೆ . ಅದಕ್ಕೆ ಅವನು ಈ ಕಾಲದಲ್ಲಿ ಇದೆಲ್ಲ ಸುಳ್ಳು. ನೀನು ಮನಸ್ಸಿಗೆ ತುಂಬಾ ಹಚ್ಚಿಕೊಂಡು ಹೆದರಿದ್ದೀಯ. ರಿಲ್ಯಾಕ್ಸ್ ಗುರು.  ನೆಟ್ ಫ್ಲಿಕ್ಸ್ ನಲ್ಲಿ ಯಾವುದಾದರೂ ಮೂವಿ ನೋಡು ಸರಿಯಾಗ್ತಿಯ ಎಂದ. 
ಬೇಡ ನಡಿ ಸ್ವಲ್ಪ ದೂರ ಗಾಡಿಯಲ್ಲಿ ರೌಂಡ್ಸ್ ಹೋಗಿಬರೋಣ ಎಂದು ಹೊರಗೆ ಬಂದು ಗಾಡಿ ನೋಡಿದರೆ ಹಿಂಭಾಗದ ಚಕ್ರ ಪಂಚರ್ ಆಗಿತ್ತು. ಸರಿ ಕಾರಿನಲ್ಲಿ ಹೊರಗೆ ಹೋದಾಗ ಬಪ್ಪಿ'ಸ್ ಬಳಿ ಗಾಡಿ ತಿರುಗಿಸಬೇಕಾದರೆ ಮತ್ತೆ ಸನ್ಯಾಸಿ ದಾರಿಯ ಮದ್ಯದಲ್ಲಿ ಬಂದ ಹಾಗೆ ಆಯಿತು.  ಗಾಬರಿಯಲ್ಲಿ ನಾನು ಕಾರ್ ನ ಹ್ಯಾಂಡ್ ಬ್ರೇಕ್ ಒತ್ತಿದಾಗ ಜೊತೆಗಿದ್ದ ಸ್ನೇಹಿತ ಯಾಕೆ ಗುರು ಏನಾಯಿತು ಎಂದ. ಸನ್ಯಾಸಿ ಸನ್ಯಾಸಿ ಎಂದಾಗ ನಿನಗೆ ಏನೋ ಆಗಿದೆ ದಾರಿಯಲ್ಲಿ ಯಾವ ಸನ್ಯಾಸಿ ಕೂಡ ಇಲ್ಲ ಅಂದ. ಕಾರನ್ನು ಅವನಿಗೆ ಓಡಿಸಲು ಹೇಳಿ ನಾನು ಅವನ ಪಕ್ಕದಲ್ಲಿ ಕುಳಿತೆ. 

ಮನೆಗೆ ಬಂದು ಪಕ್ಕದ  ಮನೆ ಆಂಟಿ ಕೊಟ್ಟ ಊಟ ಮಾಡಿ, ಹಾಸಿಗೆಯ ಮೇಲೆ ಉರುಳಿದೆ. ಸ್ನೇಹಿತನಿಗೆ ನನ್ನ ಜೊತೆಯೇ ಇರಲು ವಿನಂತಿಸಿದ್ದೆ. ಅವನು ತನ್ನ ಭಾವಿ ಪತ್ನಿಯೊಂದಿಗೆ ಫೋನಿನಲ್ಲಿ ಹರಟುತ್ತಿದ್ದ. ನನಗೆ ಯಾಕೋ ನಿದ್ದೆ ಬರದೇ ನನ್ನ ಬಳಿಯಿದ್ದ ನಿದ್ದೆ ಮಾತ್ರೆ ತೆಗೆದು ಕೊಂಡ ನಂತರ ಸ್ವಲ್ಪ ಜೋಂಪು ಬಂದಹಾಗೆ ಆಯಿತು. 

ಮಲಗಿ ಎಷ್ಟು ಹೊತ್ತಾಯಿತೊ ಗೊತ್ತಿಲ್ಲ ಎದ್ದು ನೋಡಿದರೆ ರಾತ್ರಿ 1 ಗಂಟೆ, ನೋಡಿದರೆ ಮೈಯೆಲ್ಲಾ ಸುಡುತಿತ್ತು. ಸ್ನೇಹಿತನಿಗೆ ಹೇಳಿ ಹತ್ತಿರದ ಆಸ್ಪತ್ರೆಗೆ ಹೋದಾಗ ಡ್ಯೂಟಿ ಡಾಕ್ಟರ್ ಒಬ್ಬರು ನನ್ನನ್ನು ಬೆಡ್ ಮೇಲೆ ಮಲಗಲು ಹೇಳಿ.  ಥರ್ಮಾಮೀಟರ್ ನನ್ನ ಕಂಕುಳಲ್ಲಿ ಇಟ್ಟರು. ಇಟ್ಟು ಎಷ್ಟು ಹೊತ್ತಾದರೂ ಯಾವುದೇ ರೀಡಿಂಗ್ ಬರಲಿಲ್ಲ. ಮತ್ತೆ ಬೇರೆ ಮೀಟರ್ ತಂದು ಇಟ್ಟಾಗಲೂ ಇದೆ ಕಥೆಯಾಯಿತು.  ಪರೀಕ್ಷಿಸಲು ಸ್ನೇಹಿತನಿಗೆ ಇಟ್ಟಾಗ ಸರಿಯಾದ ರೀಡಿಂಗ್ ತೋರಿಸಿತು . ಡಾಕ್ಟರ್ ಯಾಕೋ ಹೆದರಿಕೊಂಡ ಹಾಗೆ ನನಗೆ ಕಾಣಿಸಿತು.  

ಸ್ನೇಹಿತ ಅವರಿಗೆ ಏನಾಯಿತು ಅಂದಾಗ ಏನಿಲ್ಲ, ಯಾಕೆ ಇವರ ದೇಹ ಪರಿಸ್ಥಿತಿ ಚೆನ್ನಾಗಿಲ್ಲ ಹತ್ತಿರದ ಜೆ ಎಸ್ ಜೆ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ ಅಂದರು. ನನ್ನ ಸ್ನೇಹಿತ ಡಾಕ್ಟರ್ ಅವರಿಗೆ ಸಾರ್ ಇವನಿಗೆ ಏನು ಆಗಿಲ್ಲ ತುಂಬಾ  ಯೋಚನೆ ಮಾಡಿ ಈ ರೀತಿ ಆಗಿರಬಹುದು ದಯವಿಟ್ಟು ಯಾವುದಾದರೂ ಉದ್ವೇಗ ಶಮನವಾಗುವ ಔಷಧಿ ನೀಡಿ ಎಂದನು. ಅದಕ್ಕೆ ಅವರು ಆಂಕ್ಸಿಟ್ ಎಂಬ ಮಾತ್ರೆ ನೀಡಿ ಇದನ್ನು ಈಗ ಮಲಗುವ ತೆಗೆದುಕೊಳ್ಳಿ ಎಂದರು. 

ಮನೆಗೆ ಬಂದರೆ ಯಾಕೋ ಹೊಟ್ಟೆ ನೋವೆನಿಸಿತು . ಸ್ವಲ್ಪ ನೀರು ಕುಡಿದ ನಂತರ 
ಮತ್ತೆ ಹೊಟ್ಟೆ ತೊಳಸಿದಂತಾಗಿ ವಾಂತಿಯಾಯಿತು. ನೋಡಿದರೇ ತಿಂದ ಅಣ್ಣ ಜೊತೆಗೆ ಕೆಂಪು ಬಣ್ಣದ ದ್ರವ, ನನಗೇಕೋ ಇದು ರಕ್ತ ವಾಂತಿ ಎನಿಸಿ ಬಹುಶಃ ಆ ಸನ್ಯಾಸಿ ನನಗೇನೋ ಮಾಟ ಮಂತ್ರ ಮಾಡಿರಬಹುದು. ತನ್ನ ಮಗಳ ಅಪಘಾತಕ್ಕೆ ನನ್ನ ಮೇಲೆ ಸೇಡು ತೀರಿಸಿಕೊಳ್ಳುತಿದ್ದಾನೆ ಎಂದೆನಿಸಿತು. 

ಹಾಗೂ ಹೀಗೂ ಮಾಡಿ ಬೆಳಕಾದ ತಕ್ಷಣ ಆಸ್ಪತ್ರೆಗೆ ಹೋಗಿ ನೋಡಿದರೆ ಅಪಘಾತ ವಾದ ಯುವತಿಯು ಇಲ್ಲ ಕೇಳಿದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿದ್ದೇವೆ ಎಂದರು.  ಸ್ನೇಹಿತ ನಿನ್ನದು ಬರಿ ಭ್ರಮೆ ನಿನ್ನ ಮನಸ್ಸನ್ನು ಗಟ್ಟಿ ಮಾಡಿಕೋ ನಿನಗೇನೂ ಆಗಿಲ್ಲ ಆಗಿರುವು ಆಯಾಸವಷ್ಟೇ ಎಂದನು. 

ಯಾಕೋ ಅನುಮಾನ ಬಂದಂತಾಗಿ ಕಾರ್ ನ ಡ್ಯಾಶ್ಬೋರ್ಡ್ ಕ್ಯಾಮೆರಾದ ಮೆಮೊರಿ ಕಾರ್ಡ್ ಅನ್ನು ತೆಗದು ಲ್ಯಾಪ್ಟಾಪ್ಗೆ ಗೆ ಹಾಕಿ ನೆನ್ನೆ ಬಪ್ಪಿ'ಸ್ ಬಳಿ ಬಂಡ ವ್ಯಕ್ತಿಯಾರು ಎಂದು ನೋಡಿದರೆ  ಅದರಲ್ಲಿ ಇದ್ದ ಚಿತ್ರಗಳೆಲ್ಲವೂ ಮಸುಕು ಮಸುಕು. ಇಷ್ಟೊಂದು ಒಳ್ಳೆಯ ಕ್ಯಾಮೆರಾದಲ್ಲಿ ಚಿತ್ರ ಏಕೆ ಈ ರೀತಿ ಮಸುಕು ಮಸುಕು ಎಂದು ಅರ್ಥವಾಗಲಿಲ್ಲ. 

ಆ ಚಿತ್ರಗಳನ್ನು ಫೋಟೊಶಾಪ್ ತಂತ್ರಾಂಶದಲ್ಲಿ ಹೆಚ್ಚಿನ ಪರೀಕ್ಷೆಗೊಳಪಡಿಸಿ ಪ್ರಿಂಟ್ ಹಾಕಿದಾಗ ಕಂಡದ್ದು ಅದೇ ಸನ್ಯಾಸಿಯ ಫೋಟೋಗಳು.  ಎಲ್ಲ ಫ್ರೇಮ್ಗಳಲ್ಲೂ ಸನ್ಯಾಸಿಯದೆ ಚಿತ್ರಗಳು.  ನನಗಂತೂ ತಲೆ ಗಿರಗಿರ ಸುತ್ತುತ್ತಿತ್ತು. ಈ ಸನ್ಯಾಸಿಯಿಂದ ಉಳಿಗಾಲವಿಲ್ಲ ಅಂತ ಅನಿಸುತಿತ್ತು.  

ಊಟ ಮಾಡಲು ಹೋದರೆ ಅನ್ನದಲ್ಲಿ ಬರಿ ಮುಳ್ಳು ಏನೋ ಇದ್ದಂತೆ ಕಾಣುತಿತ್ತು, ಮಲಗಿದರೆ ಬರಿ ದುಸ್ವಪ್ನಗಳು, ಸನ್ಯಾಸಿ ಬಂದು ನನಗೆ ಚುಚ್ಚಿದ ಹಾಗೆ, ಹೀಗೆ ಮಲಗಿದ್ದಾಗ ರಾತ್ರಿ ಯಾರೊ ಬಂದು ನನ್ನ ಮೇಲೆ ಕುಳಿತು ಮೆಟ್ರೆ ಹಿಸುಕಿದ ಹಾಗೆ, ನನ್ನ ಕುತ್ತಿಗೆಯ ಬಳಿ ಕುಯ್ದ ಹಾಗೆ ಅನಿಸಿತು.  ಎದ್ದು ನೋಡಿದರೆ ಕುತ್ತಿಗೆಯ ಸುತ್ತೆಲ್ಲ ರಕ್ತ, ಸ್ನೇಹಿತನಿಗೆ ಸಹಾಯಕ್ಕಾಗಿ ಕೂಗಿದೆ ಅವನು ಬಂದು ಹತ್ತಿ ಮತ್ತು ಡೆಟಾಲ್ ನಿಂದ ಎಲ್ಲವನ್ನು ತೊಳೆದು. ಆಂಟಿಸೆಪ್ಟಿಕ್ ಕ್ರೀಮ್ ಅನ್ನು ಹಚ್ಚಿ ಬ್ಯಾಂಡೇಜ್ ಮಾಡಿದ. 

ಅವನ ಮುಖ ನೋಡಿದರೆ, ಗಾಬರಿಗೊಂಡ ಹಾಗಿತ್ತು , ತನ್ನ ಯಾರೋ ಸ್ನೇಹಿತರಿಗೆ ಕರೆ ಮಾಡಿ ಯಾರಾದರೂ ಸೈಕ್ರಿಯಾಟಿಸ್ಟ್ ಇದ್ದಾರೆ ಹೇಳು ನನ್ನ ಸ್ನೇಹಿತನಿಗೆ ಏನೋ ಆಗಿದೆ ಅಂದ. ನಾನು ಅವನಿಗೆ  ಸೈಕ್ರಿಯಾಟಿಸ್ಟ್ ಬದಲು ಆ ಸನ್ಯಾಸಿಯ ಅಡ್ರೆಸ್ ಹುಡುಕು ಹೋಗಿ ತಪ್ಪಿಲ್ಲದಿದ್ದರೂ  ಕ್ಷಮೆ ಕೇಳುತ್ತೇನೆ ಎಂದೆ. ಬೆಂಗಳೂರಿನ ಹೆಬ್ಬಾಳದ ಬಳಿಯ ಆಸ್ಪತ್ರೆಯೊಂದರಲ್ಲಿ ಇರುವ ಮಾಹಿತಿ ಸಿಕ್ಕ ಬಳಿಕ ಅಲ್ಲಿಗೆ ಹೋದಾಗ ಯುವತಿಯನ್ನು ಆಗಷ್ಟೇ  ಆಪರೇಷನ್ ಥಿಯೇಟರ್ ನಿಂದ ಐ ಸಿ ಯು ಗೆ ಶಿಫ್ಟ್ ಮಾಡಿದ್ದಾರೆ ನೀವು ನೋಡಲಾಗುವುದಿಲ್ಲ ಎಂದರು ಏತಕ್ಕೆ ಎಂದು ಕೇಳಿದಕ್ಕೆ ಯುವತಿಗೆ ಮೆದುಳಿನ ರಕ್ತಸ್ರಾವವಾಗುತಿತ್ತು ಆದ್ದರಿಂದ ಯುವತಿ ಸಂನ್ಯ ಪರಿಸ್ಥಿತಿಗೆ  ಬರಲು ಕನಿಷ್ಠ ಎಂದರೂ ಮೂರರಿಂದ ಆರು ತಿಂಗಳು ಬೇಕು ಎಂದರು. ಯುವತಿಯ ತಾಯಿ ನಮ್ಮನ್ನು ನೋಡಿ ಮುಖ ಕಿವುಚಿದರು. ಅವರಿಗೆ ಇದರಲ್ಲಿ ನಮ್ಮದೇನೂ ತಪ್ಪಿಲ್ಲ ದಯವಿಟ್ಟು ನಿಮ್ಮ ಮನೆಯವರಿಗೆ ನಮ್ಮನ್ನು ಕ್ಷಮಿಸಲು ಹೇಳಿ ಎಂದೆ  ಅದಕ್ಕೆ ಅವರು ನೀವುಂಟು ಅವರುಂಟು ಎಂದರು. ಅವರು ಎಲ್ಲಿದಾರೆ ಎನ್ನಲು ಅವರು ಕೊಳ್ಳೆಗಾಲದ ಸ್ಮಶಾನದಲ್ಲಿ ಯಾವುದೊ ಪೂಜೆ ಮಾಡುತ್ತಿದ್ದಾರೆ ಅಲ್ಲಿಗೆ ಹೋಗಿ ಕೇಳಿ ಅಂದರು. 

ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಬರುವಾಗ ಸಂತೆಮರಳ್ಳಿ ಬಳಿ ನಮ್ಮ ಕಾರಿಗೆ ಅಪಘಾತವಾಯಿತು.ಎಚ್ಚರವಾದಾಗ ನಾನು ಆಸ್ಪತ್ರೆಯೊಂದರಲ್ಲಿ ಇದ್ದೆ. ನನ್ನ ಪಕ್ಕದಲ್ಲಿ ಇದ್ದ ವ್ಯಕ್ತಿಯೊಬ್ಬರು ನಾನು ನವೀನ್ ಸಂಗಾಪುರ ಎಂದು ನಿಮ್ಮನ್ನೂ ನಾನೇ ಆಸ್ಪತ್ರೆಗೆ ಸೇರಿಸಿದ್ದು ಎಂದರು.  ಸರಿ ಎಂದು ಅವರಿಗೆ ನನ್ನ ಪರಿಸ್ಥಿತಿ ಹೇಳಿದೆ ನನಗೆ ಯಾವುದೊ ಕೆಟ್ಟ ಶಕ್ತಿಯ ಪ್ರಯೋಗ ನನ್ನ ಮೇಲೆ ಆಗುತ್ತಾ ಇದೆ. ಅದಕ್ಕೆ ಅವರು ನನಗೆ ಗೊತ್ತಿರುವ ಒಬ್ಬರು ವೈದ್ಯರಿದ್ದಾರೆ ಅವರು ನಿಮಗೆ ಸಹಾಯ ಮಾಡಬಹುದು ಹೋಗಿ ಅವರನ್ನು ಭೇಟಿ ಮಾಡಿ ಎಂದರು. 

ಸರಿ ಅವರು ಹೇಳಿದ ಮೈಸೂರಿನ ಕ್ಲಿನಿಕ್ಕಿಗೆ ಹೋದಾಗ, ಡಾಕ್ಟರ್ 10 ಗಂಟೆಗೆ ಬರುತ್ತಾರೆ ಕಾಯಿರಿ ಎಂದರು. ಸ್ವಲ್ಪ  ಹೊತ್ತಿನ ಬಳಿಕ ಬಳಿಕ ಬಂದ ಮೊದಲನೇ ರೂಮಿಗೆ ಹೋಗಿ ಅಂದರು. ರೂಮಿನಲ್ಲಿ ಕುಳಿತಿದ್ದ ವೈದ್ಯೆಯೊಬ್ಬರು ಬನ್ನಿ ಕುಳಿತುಕೊಳ್ಳಿ ಎಂದು ಹೇಳಿ. ನನ್ನ ಸಮಸ್ಯೆಯನ್ನು ವಿವರವಾಗಿ ಕೇಳಿದರು . 
ನಂತರ ಸಣ್ಣ ಕೊಣೆಗೆ ಕರೆದುಕೊಂಡು ಹೋಗಿ ತಲೆಗೆ ಒಂದು ಎಣ್ಣೆ ಹಾಕಿದ ಬಟ್ಟೆ ಕಟ್ಟಿದರು ಇದು ಏನು ಅಂದಿದ್ದಕ್ಕೆ ಶಿರೋಪೀಚು ಇದು ಭ್ರಮಾ ರೋಗಕ್ಕೆ ರಾಮ ಬಾಣ ಎಂದರು. ನಂತರ ಇನ್ನೊಂದು ಕತ್ತಲ ಕೋಣೆಗೆ ಕರೆದುಕೊಂಡು ಹೋಗಿ ಸಣ್ಣ ಮೊಂಬತ್ತಿಯನ್ನು ಹಚ್ಚಿ ಅದನ್ನೇ ನೋಡಲು ಹೇಳಿದರು ನಂತರ ನನಗೆ ನಿದ್ದೆ ಬಂದ ರೀತಿ ಆಯಿತು. 

ಎಚ್ಚರವಾದಾಗ ವೈದ್ಯೆ ಪಕ್ಕದಲ್ಲಿ ಕುಳಿತಿದ್ದರು, ನಿಮ್ಮ ಚಿಕಿತ್ಸೆ ಮುಗಿದಿದೆ ನೀವು ಈಗ ಸಂಪೂರ್ಣ ಆರಾಮವಾಗಿದ್ದಿರಿ ಎಂದರು ಅದಕ್ಕೆ ನಾನು ಸನ್ಯಾಸಿಯು ನನಗೆ ಇನ್ನು ಕಾಟ ಕೊಡುತ್ತಾರೆ ಎನ್ನಲು ಇಲ್ಲ ಅದೆಲ್ಲ ನಿಮ್ಮ ಭ್ರಮೆ. ನಿಮ್ಮ ಎಲ್ಲ ಒತ್ತಡಗಳಿಂದ ನೀವು ಅಧೀರರಾಗಿದ್ದೀರಿ ನಿಮ್ಮ ಮನಃಶಕ್ತಿ ಯ ಮೇಲೆ ನಂಬಿಕೆ ಇರಲಿ .  ನಿಮ್ಮ ಮಾನಸಿಕ ಶಕ್ತಿಯ ಮುಂದೆ ಪ್ರಪಂಚದ ಯಾವ ಕೆಟ್ಟ ಶಕ್ತಿಯು  ಕೆಲಸ ಮಾಡುವುದಿಲ್ಲ ಎಂದರು. 

ಅವರಿಗೆ ಕೈ ಮುಗಿದು ನಿಮ್ಮ ಫೀಸ್ ಎಷ್ಟು ಎಂದು ಕೇಳಲು ಅವರು ಫೀಸ್ ಬೇಡ. ನನಗೆ ನನ್ನ ರೋಗಿಗಳು ವಾಸಿಯಾದರೆ ಸಾಕು ಅಂದರು. ಖುಷಿಯಾಗಿ ಹೊರಗಡೆ ಬಂದಾಗ ಪಕ್ಕದ ಅಂಗಡಿಯಲ್ಲಿ ಎಫ್ ಎಂ ರೇಡಿಯೋ ಒಂದು "ಎಲ್ಲೆ ನಾನಿನ್ನ ಹೆಸರನ್ನು ಕಂಡಾಗ, ನಿನ್ನನ್ನೆ ಕಂಡಂತೆ ಖಾಸಾ ಸಂತಸ" ಎಂದು ಹಾಡು ಗುನುಗುತಿತ್ತು . 















 







Friday, January 22, 2021

ಪ್ರ - ಹಸನ

 ​​

ಎಂದಿನಂತೆ ರಾತ್ರಿಯ ಊಟ ಮುಗಿಸಿ ಮಲಗಿದಾಗ ಗಂಟೆ ಹತ್ತಾಗಿತ್ತು. ಮೊಬೈಲ್ನಲ್ಲಿ ಬೇಕಾದವರಿಗೆ ದಿನದ ಕೊನೆಯ ಮೆಸೇಜ್ ಗಳನ್ನೂ ಕಳುಹಿಸದೆ ಹೋದರೆ ನಿದ್ದೆ ಬರುವುದಿಲ್ಲವೇನೋ ಎಂಬಂತೆ, ಶುಭ ರಾತ್ರಿ ಮೆಸೇಜ್ ಕಳುಹಿಸಲೇಬೇಕು

ಸರಿ ಮಾರನೆಯ ದಿನ ಹೆಣ್ಣು ನೋಡಲು ಹೋಗಿದ್ದು ಒಂದು ಗ್ರಾಮಕ್ಕೆ, ಹುಡುಗಿಯ ಮನೆಯವರು ಎಲ್ಲರಿಗು ಒಳಗೆ ಬನ್ನಿ ಎಂದು ಹೇಳಿ ತಮ್ಮ ಪತ್ನಿಗೆ ಈಚಲು ಮರದ ಚಾಪೆ ಹಾಸಲು ಹೇಳಿದರು.  ಸರಿ ಜೀನ್ಸ್ ಪ್ಯಾಂಟ್ ತೊಟ್ಟಿದರೂ ಕಾಲು ಮಡಚಿ ಕುಳಿತದ್ದಾಯ್ತು. ಇವರೇನು ಹೆಗ್ಗೋಡು ಪ್ರಸನ್ನರ ಅಭಿಮಾನಿಗಳೇ ಇಲ್ಲ ಅವರ ಸಂಬಂದಿಕರೇ ಅರ್ಥ ಆಗಲಿಲ್ಲ. ಚೆಂದದ ಹುಡುಗಿ ನೋಡಲು ಬಂದರೆ ನೆಲದ ಮೇಲೆ ಕುಳಿತುಕೊಳ್ಳಲು ಹೇಳುವುದೇ !!

ಸರಿ. ಹುಡುಗಿಯ ಅಮ್ಮ ಬಂದು ಎಲ್ಲರಿಗು ಬೆಲ್ಲದ ಪಾನಕ ಕೊಟ್ಟರು ತನಗೆ ಡಯಟ್ ಕೋಕ್ ಬೇಕು ಎಂದು ಹೇಳಲು ಹೋದವನು, ಕೆಂಪು- ಕರಿ ಬಣ್ಣದ ಪಾನಕ ನೋಡಿ ಸುಮ್ಮನೆ ಆದನು.  ಸಿಂಪಲ್ ಲಿವಿಂಗ್ ಅಂಡ್ ಹೈ ಥಿಂಕಿಂಗ್ ಅನ್ನೋ ಇಂಗ್ಲಿಷ್ ಗಾದೆಯನ್ನು ಬೇಕಾದಷ್ಟು ಸಲ ಅವನು ಹೇಳಿದ್ದನು ಆದರೆ ಆಚರಣೆ ಕಷ್ಟ ಅನ್ನೋದು ಈಗ ಅರಿವಾಗತೊಡಗಿತು. 

ಮೈಸೂರಿನ ಬಳಿ ಇರುವ ಒಂದು ಊರು ಬದನವಾಳು , ಇದು ಖಾದಿ ಗ್ರಾಮದ್ಯೋಗ ಕೇಂದ್ರ, ಪೂಜ್ಯಪಿತ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಸ್ಥಳ. ಅಲ್ಲಿ ರಂಗಕರ್ಮಿ ಪ್ರಸನ್ನರವರು ಯಂತ್ರ ಬೇಡ, ಆಧುನಿಕ ತಂತ್ರ ಬೇಡ ನಮ್ಮ ಜೀವನ ನೈಸರ್ಗಿಕ ವಾಗಿರಲಿ ಎಂದು ಪ್ರತಿಭಟನೆ ಮಾಡಿದ್ದು ಅಲ್ಲಿಗೆ ಬಾಲಿವುಡ್ ನ ಶ್ರೇಷ್ಠ ನಟ ಇರ್ಫಾನ್ ಖಾನ್ ರವರು ತಮ್ಮ ಪತ್ನಿ ಯೊಡನೆ ಅಲ್ಲಿ ಒಂದು ದಿನ ಇದ್ದು ತಮ್ಮ ಗುರುವಿಗೆ ಬೆಂಬಲ ಸೂಚಿಸಿದ್ದರು. 




ಯಂತ್ರಗಳ ನೆರವಿಲ್ಲದೆ ಬದುಕುವುದು ಸಾಧ್ಯ ಎಂದು ಅವರು ಹಲವು ಬಾರಿ ನಿರೂಪಿಸಿದ್ದರೂ ಹಲವರಿಗೆ ಅದು ಇಷ್ಟವಾಗಲಿಲ್ಲ.  ಅಂದರೆ ಎಣ್ಣೆ ತೆಗೆಯುವುದಕ್ಕೆ ಎತ್ತಿನ ಗಾಣ, ಸಕ್ಕರೆಯ ಬದಲು ಬೆಲ್ಲ, ಪಾಂಡವಪುರ ಸಕ್ಕರೆ ಫ್ಯಾಕ್ಟರಿಯ ಬದಲು ತಮ್ಮ ಊರಿನಲ್ಲೇ ಗಾಣ ಮಾಡಿ ಬೆಲ್ಲ ಕಾಯಿಸಬೇಕು. ತೋಟಕ್ಕೆ ನೀರೆತ್ತಲು ಮೋಟಾರ್ ಬದಲಿಗೆ ಏತ ನೀರಾವರಿ. ಮಸಾಲೆ ರುಬ್ಬಲು ಮಿಕ್ಸಿಯ ಬದಲಿಗೆ ರುಬ್ಬು-ಕಲ್ಲು ...  ಬರೆಯುತ್ತ ಹೋದರೆ ಬದುಕಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ.  

ಸರಿ ಗ್ರಾಮದ್ಯೋಗದ ಪರಿಕಲ್ಪನೆ ಚೆನ್ನಾಗಿದೆ ಆದರೆ ನಮಗೆ ಆ ರೀತಿಯಲ್ಲಿ ಬದುಕುವ ಯೋಗ್ಯತೆ ಇಲ್ಲ ಆದರೆ ಈ ಮಾವನ ಮನೆಯಲ್ಲಿ ಹೇಗೆ ಇರೋದು ಅಂತ ಯೋಚನೆ ಶುರುವಾಗಿತ್ತು.  ಸರಿ ಹೇಗಾದರೂ ಆಗಲಿ ಹುಡುಗಿಯನ್ನು ನೋಡುವ  ಶಾಸ್ತ್ರ ಮುಗಿಯಲಿ ನಂತರ ಬೇಗ ಕಳಚಿಕೊಂಡರೆ ಆಯಿತು, ಇಲ್ಲ ಅಂದರೆ ಕಾಚದ ಬದಲು ಕೌಪೀನ ಕೊಡುವ ಜನ ಇವರು ಎಂದುಕೊಂಡ.   

ಸರಿ ಅಲ್ಲಿದವರೊಬ್ಬರು ಹುಡುಗಿ ಕೈಲಿ ಟೀ ಕಳಿಸಿ ಅಂದರು ಅದಕ್ಕೆ ಹುಡುಗಿಯ ಸೋದರಮಾವ ನಮ್ಮ ಹುಡುಗಿ ಟೀ ಕುಡಿಯಲ್ಲ ಬೇರೆಯವರಿಗೂ ಕುಡಿಯಲು ಬಿಡಲ್ಲ ಎಂದು ಹೇಳಿದರು ಅದಕ್ಕೆ ಹುಡುಗನ ಸ್ನೇಹಿತ ನಾನು ಕುಡಿಯಲ್ಲ ಆದರೆ ಇವರ ಜೊತೆ ಸೇರಿ ಈಗ ಕುಡಿಯುವುದನ್ನು ಕಲಿತಿದ್ದೇನೆ ಎಂದ. ಅದಕ್ಕೆ ಹುಡುಗಿಯ ಮಾವನವರು ಸುರಪಾನ ಮತ್ತು ಮಧುಪಾನ ನಾವು ಮಾಡುವುದಿಲ್ಲ ಎಂದರು . 

ಕರ್ನರೇ/ ಬೀಗರೂಟ ಮಾಡಿದಾಗ ಬಂದವರಿಗೆ ಮೂಳೆಯ ಜೊತೆಗೆ ಗಂಜಲ ಕೊಡುತ್ತೀರಾ ಎಂದು ಕೇಳಬೇಕಿನಿಸಿದರೂ ! ಈಗಲೇ ಗಂಜಲ ಒಳ್ಳೆಯದು ಕುಡಿಯಿರಿ ಇಲ್ಲ ಅದರಲ್ಲಿ ಬಾಯಿ ಮುಕ್ಕಳಿಸಿ 🙊 ಎಂದರೆ ಎಂದು ಸುಮ್ಮನಾದ. 

ಆಯ್ತು ಹುಡುಗಿಯನ್ನು ಕರಿದ ತಿಂಡಿಯ ಮತ್ತು ಖಾರದ ಜೊತೆ ಕಳುಹಿಸಿ ಎನ್ನಲು, ನಮ್ಮ ಹುಡುಗಿ ಜಂಕ್ ಫುಡ್ ತಿನ್ನುವವಳಲ್ಲ ಎಂದರು. ಹುಡುಗನಿಗೆ ಬೇರೆ ಗ್ರಹಕ್ಕೆ ಬಂದಂತಾಗಿತ್ತು. ವೈಟ್ ಫೀಲ್ಡ್ ನ ಇನ್ನೊವೇಟರ್ ನ ಮಹಡಿಯ ಮೆಟ್ಟಿಲುಗಳ ಮೇಲೆ ಕುಳಿತು ನಮ್ಮ ಜೊತೆ ಧಮ್ ಶೇರ್ ಮಾಡುವ ಹುಡುಗಿಯರೆಲ್ಲಿ, ಹ್ಯಾಪಿ ಹವರ್ ನಲ್ಲಿ ಕ್ಯಾನ್ ಗಟ್ಟಲೆ ಬಿಯರ್ ಖಾಲಿ ಮಾಡಲು ಮನೆಯಲ್ಲಿ ಸುಳ್ಳು ಹೇಳಿ , ಪಬ್ ಗೆ  ಬರುವ ಬುಲ್ಡೋಜರ್ ಗಳೆಲ್ಲಿ💃
ಅಯ್ಯೋ ಶಿವನೇ ನನಗೆ ಯಾಕಿಷ್ಟು ಕಷ್ಟ ಕೊಡ್ತೀಯಾ ? ನಾನು ನೀನಗೇನು ಅನ್ಯಾಯ ಮಾಡಿದ್ದೆ; ಈ  ಶಿವನನ್ನು ನಂಬುವ ಬದಲು ಪಕ್ಕದ ಡೆಸ್ಕ್ ನ ಪರಿಮಳನ ಪ್ರೊಪೋಸ್ ನಾದ್ರೂ ಒಪ್ಪಿದ್ರೆ ಯೇಸು ದೇವ ಪ್ರೀತಿಯಿಂದ ಕುಡಿಯಲು ಏನಾದ್ರು ಕೊಡುತ್ತಿದ್ದರೇನೋ? ಎಂತ ಅನ್ಯಾಯ !! ಇಲ್ಲಿಗೆ ಬಂದು ಕುಳಿತೇ ಎಂದು ತನ್ನ ಸೋದರಮಾವನ ಮುಖವನ್ನು ನೋಡಿದ, ಸೋದರಮಾವ ಹುಡುಗಿಯ ಮನೆಯವರಿಂದ ಒಂದು ಚೊಂಬು ಪಾನಕ ತೆಗೆದುಕೊಂಡು ಹೊಟ್ಟೆಗೆ ತುಂಬುತಿದ್ದರು. ಹೊಟ್ಟೆಬಾಕ ಮಾವ ಎಂದುಕೊಂಡ ಹೋಗಲಿ ಅಂದರೆ ಉಳಿದೊಬ್ಬ ಮಾವ ಮನೆಮುರುಕ. 

ಅಷ್ಟರಲ್ಲಿ ಯಾರೋ ಹಾಲ್ ಗೆ ಬೆಳಕು ಹಾಕಿದಂತಾಯಿತು. ಏನು  ಬೆಳಕು ಎಂದು ಕಣ್ಣು ಬಿಟ್ಟು ನೋಡಿದರೆ ಹಾಲ್ ಗೆ ಬಂದವಳು ಸೀರೆ ಉಟ್ಟ ಐಶ್ವರ್ಯ ರೈ ನ ಚಿಕ್ಕಮ್ಮನ ಮಗಳು ಇಶ್ವರ್ಯ. ಕಣ್ಣಿಗೊಂದು ಚೆಂದದ ಕನ್ನಡಕ ಮತ್ತು ಮುಖಕ್ಕೆ ಮಾಸ್ಕ.  ಸರಿ ಎಲ್ಲಾರಿಗೂ ಬಿಸ್ಕತ್ ಮತ್ತು ಹುರಿದ ಗೋಡಂಬಿ ಮತ್ತು ಪಿಸ್ತಾ ತಿನ್ನಲು ನೀಡಲಾಯಿತು. . 


ಹುಡುಗಿಯ ಕೈಯಿಂದ ತಟ್ಟೆ ತೆಗೆದುಕೊಂಡವ ಮತ್ತೆ ತಲೆ ಮೇಲಕೆತ್ತಿದ್ದು ತಟ್ಟೆ ಖಾಲಿಯಾದಮೇಲೆಯೇ. ಸರಿ  ಹುಡುಗಿಯ ತಂದೆ ನೀವೇನು ಮಾಡುತ್ತಿದ್ದೀರಾ ಎಂದರು ? ಅದಕ್ಕೆ ಹುಡುಗ ನಾನು ಡಾಕ್ಟರ್ ಆಗಬೇಕುಂತ ಇದ್ದೆ ಆದರೆ ಆಗಲಿಲ್ಲ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್ ಎಂದನು ಅದಕ್ಕೆ ಅವರು ತಿಕ ಬಗ್ಗಿಸಿ ಓದಿದ್ರೆ ಆಗ್ತಾ ಇದ್ದೆ ಅದಕ್ಕೆ ನಾವು ಸಾಫ್ಟ್ವೇರ್ ಅವರಿಗೆ ಹುಡುಗಿ ಕೊಡುವುದಿಲ್ಲ ಯಾಕೆಂದರೆ ಅವರಿಗೆ ಕೆಲ್ಸದ ಖಾತ್ರಿಯಿಲ್ಲ, ಆರೋಗ್ಯದ ಬಗ್ಗೆ ಕಾಳಜಿಯಿಲ್ಲ ಮತ್ತು ಹಣದ ಮಹತ್ವಗೊತ್ತಿಲ್ಲ, ಪಬ್ ಮತ್ತು ವೀಕೆಂಡ್ ಔಟಿಂಗ್ ನಲ್ಲಿ ಕುಡಿದು ಕುಪ್ಪಳಿಸುತ್ತಿರ ಎಂದರು ಅದಕ್ಕೆ ಹುಡುಗ ನಾನು ಬಹಳ ಗುಣವಂತ ನನಗೆ ಯಾವುದೇ ಕೆಟ್ಟ ಅಭ್ಯಾಸವಿಲ್ಲ.  ಸಿಗರೇಟ್ ಕೂಡ ಸುಟ್ಟಿಲ್ಲ ಎಂದನು. 

ಸರಿ ಹುಡುಗಿಯ ಜೊತೆ ಮಾತನಾಡುವುದಿದ್ದರೆ ಮಾತನಾಡಿ ಎಂದರು ಸರಿ ಹುಡುಗಿಯ ಜೊತೆ ಮಾತನಾಡಲು ಮನೆಯ ಹೊರಗಡೆ ಬಂದಾಗ ತಿಳಿದದ್ದು ಹುಡುಗಿ ಮೈಸೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ಡಾಕ್ಟರ್ ಎಂದು. ಜಾಸ್ತಿ ಪ್ರಶ್ನೆ ಕೇಳಿದರೆ  ಎಲ್ಲಿ ಚಾಕು ಹಾಕಿಬಿಡುತ್ತಾಳೋ ಅಂದುಕೊಂಡು  ನೀವು ನೋಡಲು ಚೆನ್ನಾಗಿದ್ದೀರ. ನಿಮಗೆ ಏನಿಷ್ಟ ಅಂದನು ಅದಕ್ಕೆ ಆ ಹುಡುಗಿ ನನಗೆ ಕಾರ್ನರ್ ಹೌಸ್ನಲ್ಲಿ ಕುಳಿತು ತಿನ್ನುವ ಐಸ್ ಕ್ರೀಮ್ ಇಷ್ಟ ಎಂದಳು. ಸರಿ ಅಲ್ಲಿಗೆ ಹೋಗೋಣ್ವಾ ಅಂದ ಅದಕ್ಕೆ ಆ ಹುಡುಗಿ ನಿಮ್ಮ ಬರ್ತ್ಡೇ ಹೋಗೋಣ 

ಹುಡುಗ: ನಿಮ್ಮ ಬರ್ತ್ಡೇ ಯಾವತ್ತು ?

ಹುಡುಗಿ: ನಾನು ಬರ್ತ್ ಡೇ  ಆಚರಿಸಲ್ಲ 

ಹುಡುಗ : ಯಾಕ್ರೀ? ಮತ್ತೆ ಏನಮಾಡ್ತಿರಿ 

ಹುಡುಗಿ: ಏನು ಮಾಡೋದಿಲ್ಲ. ಅವತ್ತು ನಾನು ಜಾಸ್ತಿ ರೋಗಿಗಳಿಗೆ ನೋಡುತ್ತೇನೆ ಅಷ್ಟೇ  ನನಗೆ ಅದರ ಬಗ್ಗೆ ಪ್ರಶ್ನೆ ಮಾಡಬ್ಯಾಡ್ರಿ ಎಂದಳು. 

ಹುಡುಗ: ಹೋಗ್ಲಿ ಬಿಡ್ರಿ  ನಾವೇ ನಿಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡ್ತೀವಿ , ಅಲನಹಳ್ಳಿಯಲ್ಲಿ ಒಳ್ಳೆ ಕುರಿ ಮಾಂಸ ಸಿಗುತ್ತೆ ಬಿರಿಯಾನಿ ಮಾಡೋಣ ಬನ್ನಿ ಎಂದ 

ಹುಡುಗಿ: ಬರ್ತ್ ಡೇ ಬೇಡ ಅಂದರೆ ಬೇಡ ಎಂದಳು 

ಒಳ್ಳೆ ಐಲು  ಹುಡುಗಿಯ ಸಹವಾಸವಾಯಿತು ಎಂದುಕೊಂಡವನಿಗೆ ಅವಳ ಕಣ್ಣುಗಳು ಬಹಳ ಹತ್ತಿರದವು ಎಂದೆನ್ನಿಸಿದವು. ನೋಡಿದರೆ ಎಲ್ಲೋ ಕಳೆದು ಹೋಗುವ; ಸೂರ್ಯನ ಕುಳಿಯ ಹಾಗೆ ಎಲ್ಲವನ್ನೂ ತನ್ನೆಡೆಗೆ ಸೆಳೆದುಕೊಳ್ಳುವ ಹಾಗೆ ಇದ್ದವು ಆ ಕಣ್ಣುಗಳು !邏



ಸರಿ ತನಗೆ ಒಪ್ಪಿಗೆ ಇದೆ ದಯವಿಟ್ಟು ನೀವು ನನ್ನ ಮದುವೆಯಾಗಿ ಎಂದು ಅವಳ ಕೈ ಹಿಡಿದುಕೊಂಡ 



ಅದಕ್ಕೆ ಅವಳು ಸ್ಯಾನಿಟೈಸ್ ಮಾಡಿಕೊಳ್ಳದೆ ನನ್ನ ಮುಟ್ಟಬೇಡಿ ಎಂದಳು 




ಇನ್ನೇನೂ ನಡೀರಿ ಹೋಗೋಣ ಮದುವೆ ಮಾತುಕತೆಗೆ ಮತ್ತೆ ಬರೋಣ ಅಂದಾಗ "ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ " ಎಂಬ ರಿಂಗಟೋನ್ ಕೇಳಿಸಿತು ತೆಗೆದು ನೋಡಿದರೆ ಸಮಯ ಬೆಳಗಿನ 8 ಗಂಟೆ. ಲಾಗಿನ್ ಆಗೋಲ್ವಾ ಎಂಬ ಅಮ್ಮನ ಕೂಗಿಗೆ ಎದ್ದು ಲ್ಯಾಪ್ಟಾಪ್ ಮುಂದೆ ಕುಳಿತನು. 

Tuesday, January 12, 2021

Teacher

 An old man meets a young man who asks:



“Do you remember me?”


And the old man says no. Then the young man tells him he was his student, And the teacher asks:

“What do you do, what do you do in life?”


The young man answers:

“Well, I became a teacher.”

“ah, how good, like me?” Asks the old man.

“Well, yes. In fact, I became a teacher because you inspired me to be like you.”

The old man, curious, asks the young man at what time he decided to become a teacher. And the young man tells him the following story:

“One day, a friend of mine, also a student, came in with a nice new watch, and I decided I wanted it.

I stole it, I took it out of his pocket.

Shortly after, my friend noticed the his watch was missing and immediately complained to our teacher, who was you.

Then you addressed the class saying, ‘This student's watch was stolen during classes today. Whoever stole it, please return it.’

I didn't give it back because I didn't want to.You closed the door and told us all to stand up and form a circle.You were going to search our pockets one by one until the watch was found. However, you told us to close our eyes, because you would only look for his watch if we all had our eyes closed.

We did as instructed.You went from pocket to pocket, and when you went through my pocket, you found the watch and took it. You kept searching everyone's pockets, and when you were done you said ‘open your eyes. We have the watch.’

You didn't tell on me and you never mentioned the episode. You never said who stole the watch either. That day you saved my dignity forever. It was the most shameful day of my life.

But this is also the day I decided not to become a thief, a bad person, etc. You never said anything, nor did you even scold me or take me aside to give me a moral lesson.

I received your message clearly. Thanks to you, I understood what a real educator needs to do.

Do you remember this episode, professor?

The old professor answered, ‘Yes, I remember the situation with the stolen watch, which I was looking for in everyone’s pocket. I didn't remember you, because I also closed my eyes while looking.’

This is the essence of teaching:

If to correct you must humiliate; you don't know how to teach.”


[Steve Daly]

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...