ಅದು ವಾಹನ ನಿಭಿಡ ಅಂಧೇರಿ ಕುರ್ಲಾ ರಸ್ತೆಯ ದೊಡ್ಡ ಕಟ್ಟಡ, ಅಲ್ಲಿನ ಐದನೇ ಮಹಡಿಗೆ ಹೋಗ ಬೇಕಾಗಿದ್ದ ನಾನು ಹೇಗೆ ಹೋಗುವುದು ಎಂದು ಸೆಕ್ಯೂರಿಟಿ ಗೆ ಕೇಳಿದೆ. ಅವನು ಅದಕ್ಕೆ ಹಿಂದಿ ಮೇ ಬೋಲೋ ಅಂದ . ಆಗಲೇ ನನಗೆ ವಾಸ್ತವ ಅರಿವಾಗಿದ್ದು ಇನ್ನು ಮೇಲೆ ಕನ್ನಡ ಇಲ್ಲ ಬರಿ ಹಿಂದಿ ಮತ್ತು ಮರಾಠಿ ನಡೆಯುತ್ತೆ ಅಂತ . ಅವನಿಗೆ ಹರಕು ಮುರುಕು ಹಿಂದಿಯಲ್ಲಿ ಹೇಳಿ ಮೇಲಿನ ಮಹಡಿ ತಲುಪಿದೆ .
ಅಲ್ಲಿಗೆ ಹೋದರೆ ಅಲ್ಲಿನ ಸೆಕ್ಯೂರಿಟಿ "ಆಪ್ಪ್ಕೋ ಕ್ಯಾ ಚಾಹಿಯೇ ಅಂದ?" ನನ್ನ ಪರಿಚಯ ಹೇಳಿ ಈ ಕಂಪನಿ ಗೆ ಹೊಸದಾಗಿ ಸೇರುತ್ತಿರೋ ಉದ್ಯೋಗಿ ಎಂದೆ . ನನ್ನನ್ನು ಪಕ್ಕದಲ್ಲಿ ಇದ್ದ ಚಿಕ್ಕ ರೂಮ್ನಲ್ಲಿ ಕೂರಿಸಿದ, ಹಲವು ನಿಮಿಷಗಳ ನಂತರ ಬಂದ ಮಹಿಳೆ ಮಾನವ ಸಂಪನ್ಮೂಲ ಅಧಿಕಾರಿ ನನ್ನ ಭುಜವನ್ನು ತಟ್ಟಿ ಹಾಯ್ ಮೈ ನೇಮ್ ಐಸ್ ಜ್ಯೋತಿ. ಐ ವಿಲ್ ಬಿ ಮ್ಯಾನೇಜಿಂಗ್ ಹೆಚ್ ಆರ್ ಫಂಕ್ಷನ್ಸ್ ಹಿಯರ್ ಅಂತ ಹೇಳಿದರು. ಅವರು ಕೈ ಕುಲುಕುವುದಕ್ಕೆ ಕೈಯನ್ನು ಮುಂದೆ ಮಾಡಿದಾಗ ನನಗೆ ಆಶ್ಚರ್ಯ, ಏಕೆಂದರೆ ನಾನು ಮುಂಚೆ ಇದ್ದ ಕಂಪನಿಗಳಲ್ಲೆಲ್ಲ ಲೇಡಿ ಕೂಡ ಶೇಕ್ ಹ್ಯಾಂಡ್ ಕೊಟ್ಟಿರಲಿಲ್ಲ ಮತ್ತು ಕೊಡುತ್ತಿರಲಿಲ್ಲ. ಸರಿ ಫರ್ಮ್ ಶೇಕ್ಹ್ಯಾಂಡ್ ಕೊಟ್ಟ ನಂತರ ನನ್ನನ್ನು ಒಳಗಡೆ ಕರೆದುಕೊಂಡು ಹೋಗಿ ನನ್ನ ಸೀಟ್ ಅನ್ನು ತೋರಿಸಿದರು.
ಹೊಸ ರಾಜ್ಯ, ಹೊಸ ಜಾಗ, ಹೊಸ ಬಾಷೆ ಮತ್ತು ಹೊಸ ಆಫೀಸ್; ಹೀಗೆ ಎಲ್ಲ ಹೊಸದು ಅಲ್ಲಿಯವರಿಗೆ ನಾನು ಕೂಡ ಹೊಸಬ. ಹಾಗು ಹೀಗೂ ಒಂದು ವಾರ ಆಯಿತು
ಒಂದು ವಾರ ಕಳೆದರೂ ಹೊಸ ಪರಿಚಯ ಆಗಲಿಲ್ಲ, ನಾನೊಬ್ಬನೇ ಊಟ, ನಾನೊಬ್ಬನೇ ಟೀ ಕುಡಿಯುತ್ತ ದಿನ ತಳ್ಳುತ್ತಿದ್ದೆ. ಒಂದು ದಿನ ಕೆಫೆಟೇರಿಯ ದಲ್ಲಿ ಟೀ ಕುಡಿಯುತ್ತಾ ಫೋನಿನಲ್ಲಿ ಮಾತನಾಡುತ್ತಿದ್ದೆ ಆಗ ಅಲ್ಲೇ ಇದ್ದ ಹುಡುಗಿಯೊಂದು " ಕುಡ್ ಯು ಪ್ಲೀಸ್ ಲೋಯರ್ ಯುವರ್ ಪಿಚ್" ಅಂತ ಹೇಳಿತು. ನಾನು ಯಾರಪ್ಪ ಈ ಹುಡುಗಿ ಎಂದು ದುರುಗುಟ್ಟಿ ನೋಡಿ ನನ್ನ ಧ್ವನಿಯನ್ನು ಕಡಿಮೆ ಮಾಡಿದೆ.
ಸ್ವಲ್ಪ ಹೊತ್ತಿನ ಬಳಿಕ ನನ್ನ ಡೆಸ್ಕ್ನ ಬಳಿ ಬಂದ ಆಕೆ, ಹಾಯ್ ನಾನು ನೇಹಾ ಭಾರ್ಗವ ಅಂತ ಇಲ್ಲಿ ಬೇಸಿಸ್ ಟೀಮ್ ನಲ್ಲಿ ಕೆಲಸ ಮಾಡುತಿದ್ದೇನೆ. ನೀವು ಎಲ್ಲಿಯವರು ಎಂದು ಕನ್ನಡದಲ್ಲಿ ಕೇಳಿದಳು. ಅದಕ್ಕೆ ನಾನು ಹಾಸನದವನು ಇಲ್ಲಿಗೆ ಕಳೆದ ವಾರ ಸೇರಿಕೊಂಡೆ; ಇಲ್ಲಿನ ಜನ ವಿಚಿತ್ರ ಯಾರೂ ಮಾತನಾಡುವುದೇ ಇಲ್ಲಅಂದೆ ಅದಕ್ಕೆ ಆ ಹುಡುಗಿ ಎಲ್ಲಾ ಮಾತನಾಡುತ್ತಾರೆ ಬಟ್ ಅವರ ಗುoಪಿನ ಜೊತೆ ಮಾತ್ರ ಎಂದಳು.
Often, it's the people you meet by "accident" that end up becoming the most important people in your life ಅಂತ ನನಗೆ ಅಂದು ತಿಳಿದಿರಲಿಲ್ಲ
ಮರು ದಿನ ನಾನು ಟೀ ಕುಡಿಯಲು ಕ್ಯಾಂಟೀನ್ಗೆ ಹೋದಾಗ ಆ ಹುಡುಗಿ ತನ್ನ ಟೀಮ್ ನವರ ಸಂಗಡ ಕುಳಿತಿದ್ದಳು, ಟೀ ತೆಗೆದುಕೊಂಡು ಬಂದಾಗ ಹಾಯ್ ಇಲ್ಲಿಗೆ ಬನ್ನಿ ಅಂದಳು ಸರಿ ಅವರದೇ ಟೇಬಲ್ನಲ್ಲಿ ಕುಳಿತು ಟೀ ಕುಡಿಯುತ್ತಾ ಅಲ್ಲಿದ್ದವರ ಪರಿಚಯವಾಯ್ತು. ಒಬ್ಬ ಸುಶಾಂತ್ ಜಾಧವ್ ಮತ್ತೊಬ್ಬ ನರಸಿಂಹ ಉಳಿದವರು ಅಂಕಿತ ಮತ್ತು ಪ್ರಿಯ ಪ್ರತಾಪನ್.
ಮುಂಬೈ ಜೀವನ ನನಗೆ ಇನ್ನು ಒಗ್ಗಿ ಕೊಳ್ಳುವುದಕ್ಕೆ ಕಷ್ಟವಾಗ್ತಾ ಇತ್ತು. ಬೆಳಗ್ಗೆ ಮತ್ತು ಸಂಜೆ ಆಟೋ ಹಿಡಿಯುವುದೇ ಒಂದು ಸಾಹಸವಾಗಿತ್ತು, ನನ್ನ ಗಮ್ಯ ಹತ್ತಿರವಿದ್ದ ಕಾರಣ ಆಟೋದವರು ಯಾರೂ ಕೂಡ ಬರುತ್ತಿರಲಿಲ್ಲ. ಕೆಲವು ಬಾರಿ ಗಂಟೆಗಟ್ಟಲೆ ಆಟೋಗಾಗಿ ಪರದಾಡಿದ್ದೂ ಇದೆ. ಮಳೆಗಾಲದಲ್ಲಿ ನನ್ನ ಪರಿಸ್ಥಿತಿ ದೇವರಿಗೆ ಪ್ರೀತಿ.
ಸೆಮಿನಾರ್ ಇದ್ದ ಕಾರಣ ಅಂದು ಆಫೀಸ್ನಲ್ಲಿ ಎಲ್ಲರು ಬೇಗ ಬಂದಿದ್ದರು, ಸೆಮಿನಾರ್ ಮುಗಿಯುವುದು ತಡವಾದ ಕಾರಣ ತಿಂಡಿ ತಿನ್ನಲು ಸಮಯ ಸಿಗಲಿಲ್ಲ, ಹೊಟ್ಟೆ ಹಸಿಯುತ್ತಿತ್ತು. ಕ್ಯಾಂಟೀನ್ನಲ್ಲಿ ಟೀ ಬಿಟ್ಟರೆ ಬೇರೆ ಏನು ಇರಲಿಲ್ಲ, ಆಗ ಅಲ್ಲೇ ಇದ್ದ ನೇಹಾ ತಿಂಡಿಯ ಬಗ್ಗೆ ಕೇಳಿದಳು ಅದಕ್ಕೆ ತಿಂಡಿ ತಿನ್ನುವುದಕ್ಕೆ ಸಮಯ ಆಗಲಿಲ್ಲ, ಮಧ್ಯಾಹ್ನ ಬೇಗ ಊಟ ಮಾಡಬೇಕು ಅಂದಿದ್ದಕ್ಕೆ. ತಗೋಳಿ ನನ್ನ ಲಂಚ್ ಬಾಕ್ಸ್ ನಲ್ಲಿ ರೊಟ್ಟಿ ಮತ್ತು ಬದನೇಕಾಯಿ ಪಲ್ಯ ಇದೆ ಎಂದಳು. ಯಾರು ಏನೇ ಕೊಟ್ಟರು ಬೇಡ ಎನ್ನಬೇಕು ಎಂದು ಅಮ್ಮ ಹೇಳಿದ್ದ ಮಾತು ನೆನಪಿಗೆ ಬಂತು! ಆದರೆ ಅಕ್ಕಿ ರೊಟ್ಟಿಯನ್ನು ಹೇಗೆ ಬೇಡ ಅನ್ನುವುದು? ಜೊತೆಗೆ ಹಸಿದಿರುವ ಹೊಟ್ಟೆ. ಅವಳ ಕೈಯಿಂದ ತೆಗೆದುಕೊಂಡು ತಿಂದೆ. ಅಬ್ಬಾ ಎಷ್ಟು ದಿನಗಳಾಗಿತ್ತು ರೊಟ್ಟಿಯನ್ನು ತಿಂದು!
ಮಧ್ಯಾಹ್ನದ ಊಟಕ್ಕೆ ಏನು ಮಾಡುವುದು ಎಂದು ನೆಹಾಳಿಗೆ ಕೇಳಿದೆ ಅದಕ್ಕೆ ಹೊರಗಡೆ ಊಟಕ್ಕೆ ಹೋಗೋಣ ಆಂದಳು, ಸರಿ ನಾನು ನೇಹಾ ಮತ್ತು ಇನ್ನಿಬರು ಊಟಕ್ಕೆ ಹೋಗಿ ತಿಂದೆವು. ಸಂಜೆ ಆಫೀಸ್ ಬಿಡುವಾಗ ನೆಹಾಳಿಗೆ ರೊಟ್ಟಿಗೆ ಥ್ಯಾಂಕ್ಸ್ ಹೇಳಿದಕ್ಕೆ ಇದೇನು ಪರವಾಗಿಲ್ಲ ಎಂದಳು.
ಮಾರನೆಯ ದಿನದಿಂದ ನಾನು ನೆಹಾಳೋಡನೆ ಊಟಕ್ಕೆ ಕೂರುತ್ತಿದ್ದೆ, ನನ್ನದು ಡಬ್ಬಾವಾಲಾನ ಟಿಫನ್ ಕ್ಯಾರಿಯರ್ ನೇಹಾಳದು ಮನೆಯ ಊಟ, ನನಗೆ ಊಟ ಮಾಡುವಾಗ ಅವಳ ತಿಂಡಿ ಸ್ವಲ್ಪ ಕೊಡುತಿದ್ದಳು . ನನಗೆ ಅದೇ ಒಂದು ಆನಂದ. ಆಫೀಸ್ ಈಗ ಬೇಜಾರಾಗ್ತಾ ಇರಲಿಲ್ಲ. ದಿನ ಬೆಳಗ್ಗೆ ಬೇಗ ಆಫೀಸ್ ಗೆ ಬಂದರೆ ಸಂಜೆ ಲೇಟ್ ಆಗಿ ಮನೆಗೆ ಹೋಗ್ತಾ ಇದ್ದೆ.
ಒಂದು ದಿನ ನೇಹಾ ಆಫೀಸ್ ಗೆ ಬರದೇ ಇದ್ದಾಗ ತುಂಬಾ ಬೇಜಾರಾಗ್ತಾ ಇತ್ತು. ಕೆಲವು ಸರಿ ಅದಕೋಸ್ಕರ ಅವಳಿಗೆ ಹೇಳ್ತ ಇದ್ದೆ ನೀನು ಬರುವುದಿಲ್ಲ ಅಂದರೆ ಮುಂಚೆನೇ ಹೇಳು ನಾನು ಕೂಡ ಬರುವುದಿಲ್ಲ ಎಂದು. ಅದಕ್ಕೆ ಅವಳು ಹೇಳಿದ್ದು ನೀನು ನನಗೋಸ್ಕರ ಆಫೀಸ್ ಗೆ ಬರ್ತೀಯ? ಅಥವಾ ಸಂಬಳಕೋಸ್ಕರ ನ?
ಶನಿವಾರ ಮತ್ತು ಬಾನುವಾರ ಬಂತೆಂದರೆ ನನಗೆ ಬೇಜಾರು ಆಗ್ತಾ ಇತ್ತು ಆದರೆ ಸುಮ್ಮನೆ ಮನೆಯಲ್ಲಿ ದಿನವೆಲ್ಲ ಮಲಗಿರ್ತ ಇದ್ದೆ. ಮನೆಯ ಹಾಲ್ ನಲ್ಲಿ ಎಣ್ಣೆ ಪಾರ್ಟಿ ನಡೀತಾ ಇರ್ತ ಇತ್ತು ನಾನು ಕುಡಿಯದ ಕಾರಣ ನನ್ನನ್ನು ಗುಂಪಿಗೆ ಸೇರಿಸ್ತಾ ಇರಲಿಲ್ಲ .
ಸೋಮವಾರ ಆಗುವುದನ್ನೇ ಕಾಯ್ತಾ ಇರ್ತ ಇದ್ದೆ ಯಾಕೆಂದರೆ "ಕಣ್ಣ ಹೊಸ್ತಿಲ ಮೇಲಿದ್ದ ಅಕ್ಕಿ-ಬೆಲ್ಲದ ಸೇರನ್ನು ಒದ್ದು ನನ್ನ ಮನದ ಮನೆಯೊಳಗೆ ಬಲಗಾಲಿಟ್ಟ ಮೊದಲ ಹುಡುಗಿ ನೀನಲ್ಲವೇ..? " ನಿನ್ನನು ನೋಡಲು ಕಾಯ್ತಾ ಇರ್ತ ಇದ್ದೆ "ಅಷ್ಟು ಮಾತ್ರದ ಹಕ್ಕು ಇರಬಾರದೇ ನನಗೆ..?! "
ಆ ವಾರ ನೇಹಾಳ ಅಮ್ಮನಿಗೆ ಹುಷಾರಿಲ್ಲದ ಕಾರಣ ಟಿಫನ್ ಬಾಕ್ಸ್ ತರ್ತಾ ಇರಲಿಲ್ಲ ಆಗಂತೂ ದಿನಾ ದಿನಾ ಹಬ್ಬ. ಪ್ರತಿ ದಿನ ಒಂದೊಂದು ಹೋಟೆಲ್ಗೆ ಹೋಗ್ತಾ ಇದ್ದೆವು.
ಮುಂಬೈನ ವಿವಿಧ ಅಡಿಗೆಯ ಪರಿಚಯ ಮಾಡಿದವಳು ಅವಳೆ. ಒಂದು ದಿನ ಗಜಾಲಿ ಅನ್ನೋ ರೆಸ್ಟೋರೆಂಟ್ ಹೋಗಿದ್ದಾಗ "ಬಾಂಬೆ ಡಕ್" ಅಂತ ಮೆನು ಕಾರ್ಡ್ ನಲ್ಲಿ ಒಂದು ಇತ್ತು. ಯಾರಾದ್ರೂ ಬಾತುಕೋಳಿ ತಿನ್ನುತ್ತಾರಾ ಅಂತ ಕೇಳಿದೆ ಅದಕ್ಕೆ ಅವಳು ಹೇಳಿದ್ದು ಅದು ಒಂದು ಜಾತಿಯ ಮೀನು, ಬಾತುಕೋಳಿಯಲ್ಲ ಎಂದಳು . ನೀನು ನಿಜವಾದ ಹಳ್ಳಿಯವನು ಎಂದಳು. ಅವಳು ಹೇಳಿದಕ್ಕೆ ನಗಬೇಕೋ ಅಳಬೇಕೊ ಗೊತ್ತಾಗಲಿಲ್ಲ ಆಗ ನೆನಪಿಗೆ ಬಂದದ್ದು ಕೆಳಗಿನ ಸಾಲುಗಳು
" ಅಯ್ಯೋ ಮಂಕಣ್ಣ ನೀ ನನ್ನವನೆ ♯,
ಯಾಕೋ ಏನೋ ನಾನು ನಿನ್ನ ಮೆಚ್ಚಿದೆ
ಹಳ್ಳಿ ಮುಖ ಎಂದೇ ಬೆನ್ನ ಹತ್ತಿದೆ"
ಅವಳೊಡನೆ ಅಂದು ಕುಳಿತು ಉಂಡ ಫಿಶಗಳು ಎಷ್ಟೋ ಲೆಕ್ಕವಿಲ್ಲ. ನನ್ನ ದಿನಗಳಂತೂ ಬಹಳ ವೇಗವಾಗಿ ಹೋಗುತಿದ್ವು ಅದಕ್ಕೆಲ್ಲ ಅವಳೇ ಕಾರಣ " I knew the word Love, you added meaning to it" ಅಂತ ಎಷ್ಟೋ ಸಾರಿ ಅಂದುಕೊಂಡೆ ಆದರೆ ಹೇಳಲಿಲ್ಲ.
ಮುಂದಿನ ವೀಕೆಂಡ್ನಲ್ಲಿ ಮರೀನ್ ಡ್ರೈವ್ ತೀರಕ್ಕೆ ಹೋಗೋಣ ಅಂತ ಹೇಳಿದೆ ಆಯಿತು ಬೇಗ ಬಾ ಅಂದಳು.
ಸರಿ ಸಂಜೆಯೇ ಅಲ್ಲಿಗೆ ಹೋಗಿ ಅಲ್ಲಿನ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಕಾಯ್ತಾ ಇದ್ದೆ, ಹತ್ತು ನಿಮಿಷದ ನಂತರ ಬಂದು ನನ್ನ ಪಕ್ಕ ಕುಳಿತಳು. ನಂಗಂತೂ ಸಮುದ್ರ ವೆಂದರೆ ಅದೇನೋ ಸೆಳೆತ. ನನ್ನ ಹಳೆಯ ಲೇಖನ "ಸಣ್ಣ ಪ್ರವಾಸ https://amarhm.blogspot.com/2014/06/blog-post_20.html " ದಲ್ಲಿ ಕೂಡ ಇದನ್ನು ಹೇಳಿದ್ದೇನೆ. ನನಗೆ ಖುಷಿಯಾಗಿ ಮಾತನಾಡೋಣ ಅಂದರೆ ನೇಹಾಳದ್ದೋ ಕಡಿಮೆ ಮಾತು. ನನಗೆ ಅನಿಸಿದ್ದು
My girl was fluent in English, Hindi, Kannada and Tulu..
But she always preferred to talk the language of eyes and heart with me..
ಗಾಳಿ ಕೂಡ ಜೋರಾಗಿ ಬೀಸುತಿತ್ತು ಆ ಗಾಳಿಗೆ ಅವಳ ಕೂದಲು ಹಾರಾಡುತ್ತಿದ್ದವು. ಸುಮ್ಮನೆ ನನ್ನನ್ನು ನೋಡಿ ಅವಳು ಮುಗುಳು ನಕ್ಕಾಗ ನನಗೆ ಹೃದಯಾಘಾತ.
ಈಗ ನೆನಪಿಸಿಕೊಂಡರೆ ಹೀಗೆ ಹೇಳಬಹುದೇ?
"ನಂಗೇನು ಗೊತ್ತಿತ್ತು ಪ್ರೀತಿನೇ ಆಗಿಬಿಡುತ್ತೆ ಅಂತ..
ನಿನ್ನ ಮುಂಗುರಳು ಹಾರಾಡೋದನ್ನ ನೋಡುತ್ತಾ ತೃಪ್ತಿಪಟ್ಟಿದ್ದೆ.."
ಯಾವಾಗ ನೀ ನನ್ನತ್ತ ನೋಡಿ ಮುಗುಳ್ನಕ್ಕೆಯೆಲ್ಲಾ, ಆಗ ಪರಿಸ್ಥಿತಿ ನನ್ನ ಕೈ ಮೀರಿ ಹೋಗಿತ್ತು.. ಹೃದಯ ಲಯ ತಪ್ಪಿ - ಎಲ್ಲಿ ಜಾರಿತೋ ಮನವು, ಎಲ್ಲೆ ಮೀರಿತೋ.. ಥರ ಆಗಿಬಿಡ್ತು.."
ಅಂದು ಅಲ್ಲೇ ಊಟ ಮಾಡಿ ಅವಳನ್ನು ಬೀಟು ನಾನು ಮನೆ ತಲುಪಿದಾಗ ಹತ್ತಾಗಿತ್ತು. ಊರಿನಿಂದ ಅಪ್ಪ ಎರಡು ಸಾರಿ ಮೊಬೈಲ್ ಗೆ ಫೋನ್ ಮಾಡಿದ್ದರೂ ನಾನು ಕರೆ ಸ್ವೀಕರಿಸುವ ಗೋಜಿಗೆ ಹೋಗಿರಲಿಲ್ಲ . ಕೇಳಿದರೆ ಏನು ಹೇಳವುದು ಎಂದು. ಮನೆಗೆ ಬಂದ ನಂತರ ಅಪ್ಪನಿಗೆ ಫೋನ್ ಮಾಡಿದೆ '
ಅಪ್ಪ: ಯಾಕೋ ಫೋನ್ ಎತ್ತುತ್ತಾ ಇಲ್ಲ ಅಂದರು
ನಾನು : ಇವತ್ತು ರಜ ಅಲ್ವಾ ? ಅದಕ್ಕೆ ಮಲಗಿದ್ದೆ. ಎಚ್ಚರ ಆಗಲಿಲ್ಲ ಅಂದೆ
ಅಪ್ಪ: ಆಯಿತು ಊಟ ಮಾಡಿ ಮಲಗು, ಹಸಿದ ಹೊಟ್ಟೆಯಲ್ಲಿ ಮಲಗಬೇಡ ಅಂದರು
ನಾನು: ಇಲ್ಲ ಮಲಗಲ್ಲ ಅಂದೆ
ಅಪ್ಪ :"ನೋಡ್ಲಾ ಅಲ್ಲಿ ಯಾರನ್ನು ಮದುವೆಯಾಗಲು ಹೋಗಬೇಡ, ಅಲ್ಲಿಯವರು ಕಚ್ಚೆ ಹಾಕ್ತಾರೆ" . ನಮಗೆ ಅದು ಆಗುವುದಿಲ್ಲ ಅಂದರು
ನಾನು: ಇಲ್ಲಪ್ಪ. ನನಗೆ ಕೆಲಸ ಮುಗಿದರೆ ಸಾಕು ಅನಿಸಿದೆ, ಸರಿ ನಾಳೆ ಫೋನ್ಮಾಡ್ತೀನಿ ಈಗ ಹೋಗಿ ಊಟ ಮಾಡ್ತೀನಿ ಎಂದು ಹೇಳಿ ಫೋನ್ ಇಟ್ಟೆ .
ಬೆಳಗ್ಗೆ ಎದ್ದು ತಲೆಗೆ ಸ್ನಾನ ಮಾಡಿ ಘಮ್ಮೆನ್ನುವ ಬಾಡಿ ಸ್ಪ್ರೇ ಹಾಕಿ ಬೇಗನೆ ಆಫೀಸ್ ತಲುಪಿದೆ.
ನೇಹಳೊಟ್ಟಿಗೆ ತಿಂಡಿ ತಿನ್ನುವಾಗ ಅಪ್ಪ ಫೋನ್ ಮಾಡಿದ ವಿಷಯ ಹೇಳಿದೆ, ಮನೆಗೆ ದಿನ ಫೋನ್ ಮಾಡು ಅವರು ನಿನಗೋಸ್ಕರ ಕಾಯ್ತಾರೆ ಅಂದಳು. ಅಂದು ಅವಳ ಲಂಚ್ ಬಾಕ್ಸ್ ನಲ್ಲಿ ಬಿರಿಯಾನಿ ತಂದ್ದಿದಳು. ಮಧ್ಯಾಹ್ನ ನಾನು ಮತ್ತು ಅವಳು ಕೂಡಿ ತಿಂದೆವು. ನೀನು ನಮ್ಮಮ್ಮನ ಬಿರಿಯಾನಿ ತಿನ್ನಬೇಕು ಕಳೆದುಹೋಗ್ತಿಯ ಅಂದೇ.
ಏನೂ ಕೂಡ ಮಾತನಾಡಲಿಲ್ಲ ಅವಳು. ನನಗೆ ಅರ್ಥವೆ ಆಗಲಿಲ್ಲ.
"ಕನ್ನಡ ಕಸ್ತೂರಿಯಂತೆ ನಾನು
ಕಷ್ಟದ ಉರ್ದುವಿನಂತೆ ಅವಳು..
ನೇರ , ದಿಟ್ಟ ನಾನು..
ಎಲ್ಲದಕ್ಕೂ ಉಲ್ಟಾ ಅವಳು
ಹಬ್ಬಕ್ಕೆ ಊರಿಗೆ ಬಂದಾಗ, ಅಮ್ಮನಿಗೆ ಕೊಡು ಎಂದು ಒಂದು ಡೋಕ್ಲಾ ಮಾಡುವ ಪಾತ್ರೆ ಕಳುಹಿಸಿದ್ದಳು, ಊರಿನಲ್ಲಿ ಖುಷಿ ಖುಷಿಯಾಗಿ ಅಪ್ಪ - ಅಮ್ಮ ಮತ್ತು ತಮ್ಮನ ಜೊತೆ ಹಬ್ಬ ಮುಗಿಸಿದಾಯ್ತು ಚಾಲುಕ್ಯ ಎಕ್ಸ್ಪ್ರೆಸ್ ರೈಲನ್ನು ಅರಸೀಕೆರೆಯಿಂದ ಹತ್ತಿ ಮುಂಬೈ ತಲುಪಿದ್ದಾಯ್ತು.
ಊರಿಂದ ನನಗೇನು ತಂದೆ ಎಂದು ಅವಳು ಕೇಳಿದಾಗ ನನ್ನ ಹತ್ತಿರ ಉತ್ತರ ಇರಲಿಲ್ಲ, ಯಾರಿಗೂ ಎಂದೂ ಉಡುಗೊರೆ ಕೊಂಡು ಕೊಡದ ಮತ್ತು ಅದರ ಬಗ್ಗೆ ತಿಳಿಯದ ನಾನು ಅದನ್ನು ಅವಳಿಗೆ ಹೇಳಿದೆ. ಅದಕ್ಕೆ ಅವಳು ನಾನು ಎಂದರೆ ನಿನಗೆ ಇಷ್ಟವಿಲ್ಲ ಅಂದಳು. ಇಲ್ಲಮ್ಮ ತಾಯಿ ನಿನಗೋಸ್ಕರ ನಾನು ಉಸಿರಾಡುತಿದ್ದೇನೆ. ಸುಮ್ಮನೆ ಇರು ಎಂದಳು. ಮಧ್ಯಾಹ್ನ ಊಟದ ಸಮಯದಲ್ಲೂ ಮಾತಿರಲಿಲ್ಲ. ಇದು ಎರಡು ದಿನ ಮುಂದುವರೆಯಿತು. ನಂತರ ಅವಳು ಸಾಮಾನ್ಯವಾದಳು.
ಮುಂದಿನ ವಾರ ಒಂದು ಗೋ- ಲೈವ್ ಗೋಸ್ಕರ ನಾನು ಚೆನ್ನೈಗೆ ಹೋಗಬೇಕಿತ್ತು, ಆಫೀಸ್ ಕಡೆಯಿಂದ ಹೋಟೆಲ್ ಲೀ ಮೆರಿಡಿಯನ್ ನಲ್ಲಿ ರೂಮ್ ಬುಕ್ ಆಯಿತು. ಇದನ್ನು ಅವಳಿಗೆ ಹೇಳಿದೆ ಅದಕ್ಕೆ ಅವಳು ನಾನು ಚೆನ್ನೈಗೆ ಬರ್ತೇನೆ ಅಂದಳು ಅದಕ್ಕೆ ನಾನು ಅಲ್ಲಿಗೆ ಬಂದು ಏನು ಮಾಡ್ತಿಯಾ ? ಇದು ಅಫಿಷಿಯಲ್ ಟ್ರಿಪ್ ಅಂದೇ ನಾನು ಏನಾದರು ಮಾಡ್ತೇನೆ, ನನಗು ಬೇರೆ ರೂಮ್ ಬುಕ್ ಮಾಡು ಅಂದಳು. ನಾನು ಅಲ್ಲಿ ಫ್ಯಾಕ್ಟರಿ ಹೋಗಿ ಬರುವುದಕ್ಕೆ ದಿನವೆಲ್ಲಾ ಆಗುತ್ತೆ. ಸುಮ್ಮನೆ ರೂಮ್ನಲ್ಲಿ ಇರೋದಿಕ್ಕೆ ಬರ್ತೀಯ ಅಂದೆ ಅದಕ್ಕೆ ಅವಳು ಆಯಿತು ಬಿಡು ಎಂದಳು.
ನಾನು ಚೆನ್ನೈ ಹೋಗಿ ಬರುವಷ್ಟರಲ್ಲಿ ಅವಳು ಕೆಲ್ಸಕ್ಕೆ ರಾಜೀನಾಮೆ ನೀಡಿ ಆಗಿದೆ ಎಂದು ವಿಷಯ ತಿಳಿಯಿತು , ಕೇಳಿದರೆ ಏನು ಉತ್ತರಿಸಲಿಲ್ಲ ಅವಳು. ನಿನಗೆ ಕೆಲಸವೇ ಮುಖ್ಯ ನಾನಲ್ಲ ಎಂದಳು .
ನಾನು ಮತ್ತೆ ಪುಣೆಗೆ, ಮತ್ತು ಚೆನ್ನೈ ಹೋಗಿ ಬರುವಷ್ಟರಲ್ಲಿ ಅವಳ ನೋಟೀಸ್ ಪಿರಿಯಡ್ ಮುಗಿದಿತ್ತು. ನನ್ನ ಕರೆಯನ್ನು ಅವಳು ಸ್ವೀಕರಿಸಲಿಲ್ಲ .
Separation didn’t happen all of a sudden.. You were kind to give enough signals.. I was stupid not to see it.
ಆಫೀಸ್ ನನಗೆ ಮುಳ್ಳಿನ ನೆಲವಾಗತೊಡಗಿತ್ತು ಎಲ್ಲಿ ನೋಡಿದರೂ ಅವಳ ನೆನಪೇ ಕಾಡುತಿತ್ತು. ಮನೆಗೆ ಹೋದರೆ ಅಲ್ಲೂ ಬೇಸರ
ಅವಳು ನನ್ನೊಟ್ಟಿಗಿದ್ದಾಗ
ನಾನು ಕುಡಿಯುತ್ತಿರಲಿಲ್ಲ..
ಅವಳ ಕಣ್ಣ ನಶೆ ಸಾಕಿತ್ತು ಮತ್ತೇರಲು, ಬೇರೇನೂ ಬೇಕಿರಲಿಲ್ಲ
ಈಗ ಬೇಸರ ಕಳೆಯಲು ಸ್ನೇಹಿತರ ಜೊತೆ ಮದ್ಯದ ಪಾರ್ಟಿಗಳಲ್ಲಿ ಬಾಗಿಯಾಗತೊಡಗಿದ್ದೆ. ಮದ್ಯದ ಅಮಲಿನಲ್ಲಿ ರಾತ್ರಿಯೇನೋ ಕಳೆಯತೊಡಗಿತ್ತು ಆದರೆ ಹಗಲು ಕಷ್ಟವಾಗಿತ್ತು. ಒಂದು ದಿನ ರಾತ್ರಿ ಕನಸಿನಲ್ಲಿ ಅವಳು ಬಿಟ್ಟು ಹೋದಳೆಂದು ಎಚ್ಚರವಾಗಿತ್ತು ನೋಡಿದರೆ
" ನೀನು ನನ್ನನ್ನು ಬಿಟ್ಟು ಹೋದಂತೆ - ಕೆಟ್ಟ ಕನಸು ಬಿತ್ತೆಂದು ತಡಬಡಿಸಿ ಎದ್ದೆ..
ಎದ್ದ ಮೇಲೇ ಅರಿವಾದದ್ದು - ಈ ನಿಜದಿಂದ ದೂರ ಹೋಗಲೆಂದೇ ನಾ ನಿದ್ರೆ ಮಾಡಿದ್ದೆ..😴"
ಮ್ಯಾನೇಜ್ಮೆಂಟ್ ಕಮಿಟಿ ವಿನಂತಿ ಮಾಡಿ ನನಗೆ ಇಲ್ಲಿಂದ ವರ್ಗಾವಣೆ ನೀಡಿ ನನ್ನ ಮಾನಸಿಕ ಅರೋಗ್ಯ ಸರಿಯಿಲ್ಲ ಎಂದು ಹೇಳಿ ಬೆಂಗಳೂರಿಗೆ ಬಂದೆ.
ಇಲ್ಲೂ ಕೂಡ ಅವಳದೇ ನೆನಪುಗಳು.
ಇಟ್ ಸೀಮ್ಸ್ "I acted blind in the Journey of ‘me to us, us to you, you to who are you ?’"
ಬೆಂಗಳೂರಿಗೆ ಬಂದು ಇಷ್ಟು ದಿನಗಳಾದರೂ ನನ್ನ ಕರೆಯನ್ನು ಅವಳು ಸ್ವೀಕರಿಸುತ್ತಿಲ್ಲ
ನನಗೆ ಸುತ್ತಲೂ ಆವರಿಸಿದ ನಿರಾಶೆ 😞
ಎತ್ತ ನೋಡಿದರೂ ನಗುವಿನ ಸುಳಿವಿಲ್ಲ..
ಅವಳ ಮನದ ಹಾದಿಯಲ್ಲಿ
ಇಂದಿಗೂ ಪ್ರೀತಿಯ ಬೀದಿದೀಪ ಬೆಳಗಲ್ಲ.. 💔