Sunday, December 27, 2020

ನೇರಳೆ ಗುಲಾಬಿ

 ನಿಶಾ ಊಟ ಕೊಡ್ತೀಯಾ ಎಂದು ಆಕಾಶ್  ಕೈ ಕಾಲು ತೊಳೆದೆಕೊಂಡು ಅಮ್ಮನ ಪಕ್ಕ ಕುಳಿತು ತನ್ನ ಮಡದಿಗೆ ಕೇಳಿದ, ಸರಿ ಎಂದು ಅನ್ನ, ತೊವ್ವೆ ತಟ್ಟೆಗೆ ಹಾಕಿ ಕೊಟ್ಟಳು, ನಂತರ ಅತ್ತೆಗೆ ಊಟ ಬಡಿಸಿ ತಾನು ಊಟ ಮಾಡಿದಳು ನಂತರ   ಅಡಿಗೆ ಮನೆ ಸಿಂಕ್ ನಲ್ಲಿದ್ದ ಪಾತ್ರೆಗಳನ್ನು ತೊಳೆದು, ಬೆಳಗ್ಗೆ ತಿಂಡಿಗೆ ತರಕಾರಿ ಹೆಚ್ಚಿಟ್ಟು ಮಲಗಿದಳು. 


ಬೆಳಗ್ಗೆಯೇ ಎದ್ದ ನಿಶಾ ಕಾಫಿಗೆ ಡಿಕಾಕ್ಷನ್ ಹಾಕಿ, ಆಕಾಶ್   ಜೊತೆ ಕಾಫಿ ಕುಡಿದು  ತಿಂಡಿ ರೆಡಿ ಮಾಡಿದಳು, ಎಲ್ಜಿ ಅಲ್ಟ್ರಾ ಗ್ರೈಂಡರ್ನಲ್ಲಿ ರುಬ್ಬಿದ ದೋಸೆಗೆ ಕೆಂಪು ಚಟ್ನಿ  ಮತ್ತು ಆಲೂಗಡ್ಡೆ ಪಲ್ಯ ರುಚಿಕೊಟ್ಟವು. ನಂತರ ಆಕಾಶ್ ಕೆಲಸಕ್ಕೆ  ನಂತರ ತಾನೂ ಹೊರಟು ಅತ್ತೆಗೆ ಬಾಗಿಲು ಹಾಕಿ ಕೊಳ್ಳಲು ಹೇಳಿ ಕಾರ್ ನಲ್ಲಿ ತನ್ನ ಕ್ಲಿನಿಕ್ ಗೆ ಹೊರಟಳು.  

ನಗರದ ಮಧ್ಯಭಾಗದಲ್ಲಿರುವ ಕ್ಲಿನಿಕ್ ತಲುಪಲು ಎಚ್ಚೆಂದರೆ ಹತ್ತು ನಿಮಿಷ ಸಾಕು ಎಂದು ನಿಧಾನವಾಗಿ ಡ್ರೈವ್ ಮಾಡುತಿದ್ದಳು. ಅವಳ ಕಾರ್ ನ ಮೇಲಿದ್ದ ಡಾಕ್ಟರ್ ಲೋಗೋನಿಂದ [ಆಸ್ಕ್ಲೆಪಿಯೋಸ್ - ಇದು ಗ್ರೀಕ್ ದೇವರ ಚಿನ್ಹೆ] ಆದ್ದರಿಂದ ಯಾವ ಪೊಲೀಸರೂ ಕೂಡ ಗಾಡಿಗೆ ಕೈಯೊಡ್ಡಲಿಲ್ಲ. ಗಾಡಿ ನಿಲ್ಲಿಸಿ ಆಗಲೇ ಕಾಯುತಿದ್ದ ಪೇಷಂಟಗಳನ್ನು ನೋಡಲು ಶುರುಮಾಡಿದಳು. 

ಮೊದಲು ಬಂದವರು ನಮಸ್ಕಾರ ಎಂದು ಹೇಳಿ ನನ್ನ ಹೆಸರು ರಾಮಚಂದ್ರ ರಾಯ, ನಾನು ಮಂಡ್ಯದವನು , ಇವಳು ನನ್ನ ಮಗಳು  ಸುಶ್ಮಿತಾ. ಆಲನಹಳ್ಳಿಯಲ್ಲಿ ಡಿಗ್ರಿ ಓದುತ್ತಿದ್ದಾಳೆ.  ಡಿಗ್ರಿಗೆ ಸೇರಿದಾಗಿನಿಂದ  ಊಟ ತಿಂಡಿ ಕಡಿಮೆ ತಿನ್ನುತಿದ್ದಾಳೆ,  ಕೇಳಿದರೆ ಹಸಿವಿಲ್ಲ ಎನ್ನುತ್ತಾಳೆ.  ಯಾವ ಡಾಕ್ಟರಿಗೆ ತೋರಿಸಿದರೂ ಸರಿಯಾಗಿಲ್ಲ ಎಂದು ತಮ್ಮ ಬ್ಯಾಗಿನಿಂದ ರಕ್ತ ಪರೀಕ್ಷೆಯ ರಿಪೋರ್ಟ್ ಗಳು, ಹೊಟ್ಟೆಯ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಎಂಡೊಸ್ಕೋಪಿಯ ಪತ್ರಗಳನ್ನು ಟೇಬಲ್ ಮೇಲಿಟ್ಟರು. 
ಡಾ। ನಿಶಾ ಅದ್ಯಾವುದನ್ನೂ ನೋಡದೆ ಸುಶ್ಮಿತಾಳ  ಮೇಲೆ ದೃಷ್ಟಿ ಹಾಯಿಸಿದರು. 


ಬೆಳ್ಳಗೆ ಉದ್ದವಿದ್ದ ಹುಡುಗಿ ಲಕ್ಷಣವಾಗಿ ಕಣ್ಣು ಕಪ್ಪು (ಕಣ್ಣಿನ ಕಾಡಿಗೆ) ಹಚ್ಚಿ, ಎತ್ತಲೋ ನೋಡುತ್ತ ಕುಳಿತಿದ್ದಳು, ಆದರೆ ದೇಹ ಸರಿಯಾದ ಪೋಷಣೆಯಿಲ್ಲದೆ ಕೃಶವಾಗಿತ್ತು. ನಂತರ ರಿಪೋರ್ಟ್ ಗಳನ್ನೂ ನೋಡಿದಾಗ ಎಲ್ಲ ಸರಿಯಾಗಿತ್ತು. 
ಸುಶ್ಮಿತಾ ಜೊತೆ ಮಾತನಾಡಿದಾಗ ತಿಳಿದದ್ದು ಅವಳಿಗೆ ಹಸಿವಿದ್ದಾಗ ಬೇರೊಂದು ಬಗೆಯ ಆನಂದ ದೊರೆಯುತ್ತದೆ ಹಾಗೂ ಊಟ ತಿಂಡಿ ತಿಂದರೆ ದಪ್ಪವಾಗುವ ಭಯ ವಿರುವುದು ಗೊತ್ತಾಗುತ್ತದೆ. ಮತ್ತೆ ವಿಚಾರ ಮಾಡಿದಾಗ ಡಿಗ್ರಿ ಸೇರುವ ಹೊತ್ತಿನಲ್ಲಿ ಜ್ವರ ಬಂದ ನಂತರ ಹೀಗೆಲ್ಲ ಆಗಲು ಶುರುವಾಗಿದ್ದು ಎಂದು ರಾಮಚಂದ್ರ ರಾಯರು  ಉತ್ತರಿಸದರು.  

ಅವರಿಗೆ ಸ್ವಲ್ಪ  ಹೊತ್ತು ಹೊರಗೆ ಕಾಯಲು ಹೇಳಿ, ಡಾ। ನಿಶಾ ಎರಡನೇ ರೋಗಿಯನ್ನು ಒಳ ಕರೆದರು. ಆಗ ಬಂದಿದ್ದು 45 ವರ್ಷದ ಮಾಲಾ ಎನ್ನುವ ಮಹಿಳೆ ಅವರ ಜೊತೆ 22 ವರ್ಷದ ಯುವಕನೋರ್ವ ಬಂದಿದ್ದ. ಕುರುಚಲು ಗಡ್ಡ ಹಾಗು ಮಾಸಿದ ಜೀನ್ಸ್ ದರಿಸಿದ್ದ ಹುಡುಗ ಪ್ರತಿಯೊಂದನ್ನು ಕಣ್ಣಿನಲ್ಲೇ ಪರೀಕ್ಷಿಸತೊಡಗಿದ್ದ. 

ಬಂದವರೇ ದಯಮಾಡಿ ಡಾಕ್ಟರ್ ನನಗೆ ನನ್ನ ಮಗನನ್ನು ಸುದ್ದ ಮಾಡಿ ಕೊಡಿ. ಇವನು ಒಂದು ವರ್ಷದಿಂದ ಸರಿಯಿಲ್ಲ ಎಂದರು . ಅವನು ಏನು ಓದುತಿದ್ದಾನೆ ಎಂದಾಗ ಅವನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಿ ಆರು ತಿಂಗಳಾಯಿತು, ಅವನು ಒಬ್ಬನೇ ರೂಮಿನಲ್ಲಿ ಇರುತ್ತಾನೆ. ಸುಮ್ಮನೆ ಸಂಶಯಪಡುತ್ತಾನೆ, ಒಬ್ಬಂಟಿಯಾಗೇ ಮಾತನಾಡಿಕೊಳ್ಳುತ್ತಾನೆ. ಎಷ್ಟು ದೇವರು ದಿಂಡರು ಮಾಡಿದರು ಪ್ರಯೋಜನವಾಗಲಿಲ್ಲ. ಶಾಂತಿ ಮಾಡಿಸಿದರು ಗುಣವಾಗಲಿಲ್ಲ ಎಂದರು. ಅವನಿಗೆ ಬ್ಲಡ್ ಟೆಸ್ಟ್ ಮಾಡಲು ಹೇಳಿದ ಡಾಕ್ಟರ್. ರಿಪೋರ್ಟ್ ಬಂದ  ನಂತರ ಬನ್ನಿ ಎಂದರು. 

ನಂತರ ಡಾಕ್ಟರ್ ತಮ್ಮ ಅಲ್ಮೇರಾದಿಂದ ಕೆಲವು ರೆಫರೆನ್ಸ್ ಬುಕ್ ಅನ್ನು ತೆಗೆದು ಕೆಲವು ಟಿಪ್ಪಣಿಗಳನ್ನು ಓದಲು ಶುರುಮಾಡಿದರು. ತಾವು ಮಾನಸ ರೋಗದಲ್ಲಿ ಸ್ನಾತಕೋತ್ತರ ಪದವಿ ಮಾಡಿದಾಗ ಕೊಂಡ ಪುಸ್ತಕಗಳವು ಎಂಬುದನ್ನು ನೆನೆದು ಅವರು ಭಾವುಕರಾದರು. ತಾವು ಪದವಿ ಮುಗಿಸಿದ್ದು ಎಲ್ಲರೂ ಹಣ ಮತ್ತು ಹೆಸರು ಬರುವ ವಿಷಯ ತೆಗೆದುಕೋ ಅಂದಾಗ ತಾನು ಮಾನಸ ರೋಗ ತೆಗೆದುಕೊಂಡದ್ದು ಮತ್ತು ಅದಕೋಸ್ಕರ ತನ್ನ ಪ್ರೀತಿ ಪಾತ್ರರನ್ನು ಬಿಟ್ಟು ಹಾಸನದ ಖಾಸಗಿ ಕಾಲೇಜು ಸೇರಿದ್ದು ಅಲ್ಲಿ  ಹೋರಾಟ ಮಾಡಿದ 3 ವರ್ಷಗಳು ಅವರ ಕಣ್ಣಲ್ಲಿ ನೀರು ಬರಿಸಿದವು, ತಮ್ಮ ಕಪ್ಪನೆಯ ಕನ್ನಡಕ ತೆಗೆದುಕೊಂಡು ಕಣ್ಣು ಒರೆಸಿಕೊಂಡ ಅವರು, ಮುಖದ ಬಟ್ಟೆ ಮಾಸ್ಕ ಅನ್ನು ತೆಗೆದು ಚೇರ್ ನಲ್ಲಿ ಹಾಗೆಯೆ ಹಿಂದಕ್ಕೆ ಒರಗಿದರು. 

ತಾವು ಹಾಸನಕ್ಕೆ ಸೇರಿದ ಆ ದಿನಗಳು ತಮ್ಮ ಮುಂದೆ ಬಂದವು. ತಾವು ಪದವಿ ಓದಿದ ಕಾಲೇಜಿಗಿಂತ ಇಲ್ಲಿನ ಪರಿಸರ ಬೇರೆಯಿತ್ತು. ಎಲ್ಲಿ ನೋಡಿದರೂ ಒಣ ಪ್ರತಿಷ್ಠೆ, ದುರಹಂಕಾರ ಹಾಗು ತಾವು ಲೆಕ್ಚರರ್ ಎಂಬ ಸಂಸ್ಕಾರ ಮರೆತ ಭೋದಕ ವೃಂದ  ಬಗ್ಗೆ ಡಾ। ನಿಶಾಳಿಗೆ  ಆಶ್ಚರ್ಯ ಮತ್ತು ಬೇಸರ ತರಿಸಿದ್ದವು.  ಸೂಕ್ಷ್ಮ, ಮೃದು ಮತ್ತು ಹೊಳಪಿನ ಕಣ್ಣಿನ ಯುವ ಡಾಕ್ಟರಿಗೆ ಪ್ರಪಂಚ ಹೀಗೂ ಕೂಡ ಇರುತ್ತದೆ ಎಂದು ತಿಳಿದಿರಲಿಲ್ಲ. 
ಹತ್ತು ನಿಮಿಷ ಹೊರಗಡೆ ಹೋದರು ಥಟ್ ಅಂತ ಫೋನ್ ಮಾಡಿ ಎಲ್ಲಿದ್ದೀಯ, ಬಾ ಓ. ಪಿ. ಡಿ. ಗೆ ಎಂದು ಕರೆ ಮಾಡುವ ಲೆಕ್ಚರರ್ಗಳು ,  ಮೈ ಗೆ ಹುಷಾರಿಲ್ಲ ಅಂದರು ಮಲಗಲು ಬಿಡದ ಮಹಿಳಾ ಡೀನ್ ಮತ್ತು ವರ್ಷಕೊಂದು ಬಾರಿ ಊರಿಗೆ ಹೋಗಲು ಅನುಮತಿ ನಿರಾಕರಿಸುವ ವಿಭಾಗದ ಮುಖ್ಯಸ್ಥ ಇವರೆಲ್ಲರ ಮದ್ಯೆ ತಾನು ಪಿ ಜಿ ಮುಗಿಸಿದ್ದೇ ಆಶ್ಚರ ಎಂದುಕೊಂಡ ನಿಶಾ ತಮ್ಮ ಪತಿಗೆ ಕರೆ ಮಾಡಿ ಇಂದು ಊಟಕ್ಕೆ ಮನೆಗೆ ಬರಲಾಗುವುದಿಲ್ಲ. ಸಂಜೆ ಬೇಗ ಬರುತ್ತೇನೆ ಎಂದರು. ಆಕಾಶ್ ಅಲ್ಲಿಗೆ ಬಿರಿಯಾನಿ ಆರ್ಡರ್ ಮಾಡಲೇ ಅಂದರೂ ಮಾಂಸಾಹಾರ ಬೇಡ ನಾನು ತಿನ್ನುವುದು ತಿಂಗಳಿಗೆ ಒಮ್ಮೆ ಅಲ್ಲವೇ ಎಂದು ಪಕ್ಕದ ಹೊಟೇಲಿಂದ ಉತ್ತರ ಭಾರತದ ಥಾಲಿ ತರಲು ತಮ್ಮ ಹೆಲ್ಪರ್ ಆಂಟಿಗೆ ಹೇಳಿದರು. 

ಊಟ ಮುಗಿದ ಬಳಿಕ ಸುಶ್ಮಿತಾಳನ್ನು ಕರೆಸಿ ನೀನು ಡಿಗ್ರಿ ಮುಂಚೆ ಯಾರಿಗಾದರೂ ಮುತ್ತು ಕೊಟ್ಟಿದಿಯ ಎಂದರು? ಅದಕ್ಕೆ ನಿಶಾ ಹೌದು ಪಿ ಯು ಸಿ ಮುಗಿದ ಬಳಿಕ ಪಾರ್ಟಿ ಯೊಂದರಲ್ಲಿ ನನ್ನ ಸ್ನೇಹಿತನೊಬ್ಬನಿಗೆ ಮುತ್ತು ಕೊಟ್ಟಿದೆ ಅಷ್ಟೇ ಆದರೆ ದಯವಿಟ್ಟು ಇದನ್ನು ನಮ್ಮ ತಂದೆಗೆ ಹೇಳಬೇಡಿ ಎಂದಳು. 

ನಂತರ ರಾಮಚಂದ್ರ ರಾಯರನ್ನು ಕರೆಸಿದ ನಿಶಾ ನಿಮ್ಮ ಮಗಳಿಗೆ ಅನೋರೆಕ್ಸಿಯಾ ನರ್ವೋಸಾ ಎಂಬ ರೋಗ ಇದೆ ಇದನ್ನು ಗುಣ ಪಡಿಸಬಹುದು. ಎಂದು ಕೆಲವು ಮಾತ್ರೆಗಳನ್ನು ಬರೆದು ಕೊಟ್ಟರು. ಅವು ಎಪ್ಸ್ಟೀನ್-ಬಾರ್ ವೈರಸ್ ಅನ್ನು ನಾಶ ಮಾಡಲು ಕೊಟ್ಟ ಆಂಟಿ ವೈರಲ್ ಮಾತ್ರೆಗಳಾಗಿದ್ದವು. 

ನಂತರ ಮಾಲಾ ರನ್ನು ಕರೆದು ಅವರ ಮಗನಿಗೆ ಯಾವುದೇ ಡ್ರಗ್ಸ್ ಸೇವನೆಯ ಅಭ್ಯಾಸ ವಿಲ್ಲವೆಂದು, ಇದು ಸ್ಕಿಜೋಫ್ರೇನಿಯಾ ಎಂಬ ಕಾಯಿಲೆಯಾಗಿದ್ದು ವಾಸಿ ಮಾಡಲು ಸಾಧ್ಯ ಎಂದು ಹೇಳಿ ಕೆಲವು ಸಪ್ಪ್ರೆಸೆಂಟ್ ಮಾತ್ರೆಗಳ್ಳನ್ನು ಬರೆದು ಮತ್ತೆ ತಮ್ಮನ್ನು ಒಂದು ವಾರದ ಬಳಿಕ ಭೇಟಿಯಾಗಲು ಹೇಳಿದರು. 

ಮನೆಗೆ ಬಂದಾಗ ಆಗಲೇ ಆಕಾಶ್ ರಾತ್ರಿಗೆ ಚಪಾತಿ ಹಿಟ್ಟು ಕಲಸಿ, ಗಿಡಗಳಿಗೆ ನೀರು ಹಾಕಿದ್ದ. ತನ್ನ ಮುದ್ದಿನ ಮಡದಿಗಾಗಿ ರಬ್ಬರ್ ಗಿಡ ಮತ್ತು ಝಮಿಯಾ ಜಿ ಜಿ ಗಿಡ ತಂದು ಅವಳ ಟೇಬಲ್ ಮೇಲಿಟ್ಟಿದ್ದ. ವಯಸಿನಲ್ಲಿ ದೊಡ್ಡವನಾದರೂ ತನಗೆ ಇಂತಹ ಪತಿ ಸಿಕ್ಕಿದು ನನ್ನ ಅದೃಷ್ಟ ಎಂದುಕೊಂಡ ನಿಶಾ ಕರೋನ ಭಯದಿಂದಾಗಿ ಸ್ನಾನಕ್ಕೆ ಹೆಜ್ಜೆ ಹಾಕಿದಳು. 



ಇತ್ತ ಆಕಾಶ್ ಈರುಳ್ಳಿ ಹೆಚ್ಚುವ ತನ್ನ ಕಾಯಕ ಮುಂದುವರೆಸಿದ, ಮಡದಿಗೆ ಮೊಟ್ಟೆ ಫ್ರೈಗೆ ಸಹಾಯವಾಗಲಿ ಎಂದು . 

Wednesday, December 23, 2020

ಕಾಲೇಜು ಗಿಣಿಗಳು ಮತ್ತು ಮೆಸೇಜ್ 

ಇದೆ ಮೊದಲ ಒಲ ಓಲೆ ಇದು, 
ಹೆದೆಯ ತೊದಲ ಕರೆಯೋಲೇ ಇದು 
ಕೈ ಇಡಿದು ಕಾಪಾಡು ; ಈ ಪ್ರೀತಿಯನ್ನ ಎಂದು ಹಾಡು ರೇಡಿಯೋ ಬಿಗ್ ಎಫ್ ಎಮ್ ನಲ್ಲಿ ಬರುತ್ತಿದ್ದರೆ ಅದರ ಕೇಳುತ್ತಿದ್ದ ರಂಗನ ಪಾಡು ಹೇಳದಾಗಿತ್ತು. 

ವೊಡಾಫೋನ್ ಸಿಮ್ ನಲ್ಲಿದ್ದ ಅಂದಿನ ಮೆಸೇಜ್ ಪ್ಯಾಕ್ ಖಾಲಿಯಾಗಿತ್ತು. ಇಷ್ಟು ಬೇಗ 150 ಟೆಕ್ಸ್ಟ್ ಮೆಸೇಜ್ಗಳು ಮುಗಿದು ಹೋದವೇ ? ಎಂದು ಕೊಂಡವನು , ಗೆಳೆಯ ಶಿಸ್ತಿನ ಸಿಪಾಯಿ ವಿನೋದನ ಬಳಿ ಮೊಬೈಲ್ ಹೇಗೆ ಕೇಳುವುದು ಎಂದು ತಂತ್ರ ಹೆಣೆಯ ತೊಡಗಿದ. 

ಅದು ಮಂಡ್ಯ ಜಿಲ್ಲೆಯ ಪ್ರಸಿದ್ಧ ಮಠದ  ಇಂಜಿನಿಯರಿಂಗ್ ಕಾಲೇಜು. ಅದರ ಟೀಚಿಂಗ್ ಬ್ಲಾಕ್ ನ  ಕ್ಯಾಂಪಸ್ ನಲ್ಲೆ ಇರುವುದು ಹುಡುಗರ ಹಾಸ್ಟೆಲ್.  ಅದರ ಪಕ್ಕದಲ್ಲಿ ಹುಡುಗರ ಮೆಸ್ , ಇದರ ಪಕ್ಕದಲ್ಲಿ ಲೈಬ್ರರಿ.  ಲೈಬ್ರರಿಗೆ ಯಾರೇ ಹೋಗಬೇಕೆಂದರೂ ಹುಡುಗರ ಹಾಸ್ಟೆಲ್ನ ಮುಂದೇನೆ ಹೋಗಬೇಕು. ಅಲ್ಲಿಗೆ ಹೋಗುವವರನ್ನು ನೋಡುವುದಕ್ಕೆಂದೇ ಹುಡುಗರ ಗುಂಪು ಹಾಸ್ಟೆಲ್ನ ಗೇಟ್ ಬಳಿಯೇ ಇರುತ್ತಿದ್ದರು. ಅಲ್ಲಿಗೆ ಹೋಗುವ - ಬರುವ ಹುಡುಗಿಯರನ್ನು ನೋಡಲು ಹುಡುಗರು ಪಾಪ ಹಾಸ್ಟೆಲ್ ಗೇಟಿನ ಬಳಿ ಕಾದಿದ್ದೋ ಕಾದಿದ್ದು; ಬಂದ ನಂತರ ಕೀಚಾಯಿಸಿ ಉಗಿಸಿಕೊಳ್ಳುದು ಕಾಮನ್ !

ಇಂಜಿನಿಯರಿಂಗ್ ಓದುವವರಿಗೆ ಗಣಿತ ಮೊದಲು ಎರಡು ವರ್ಷ ಕಡ್ಡಾಯ ವಿಷಯ.  ಲೆಕ್ಕದಲ್ಲಿ ತಿಳುವಳಿಕೆ ಕಡಿಮೆ ಇರುವ ನನಂತವರಿಗೆ ಅದು ಯಾವಾಗ್ಲೂ ಕಬ್ಬಿಣ. ನಮಗೆ ಗಣಿತ ಬೋದಿಸುತ್ತಿದ ಹೊಸ ಲೆಕ್ಚರರ್ ಒಬ್ಬರು ಲೈಬ್ರರಿಗೆ ಹೋಗಲು ಹೋಗುತ್ತಿದಾಗ. ಯಾರೋ ಹುಡುಗರು ' ತಿಕಲ ತಿಕಲ ' ಅಂತ ಕೂಗಿದ್ದಾರೆ.  
ನಂತರ ಆ ಲೆಕ್ಚರರ್ ಪ್ರಿನ್ಸಿಪಾಲ್ ಗೆ ಕಂಪ್ಲೇಂಟ್ ಮಾಡಿ, ಏನೂ ಮಾಡಿದರು ಯಾರು ಕೂಗಿದ್ದು ಅಂತ ತಿಳಿಯಲಿಲ್ಲ. ತಿಲಕ್ ಸರ್ ನನಗೆ ತಿಕಲ ಕೂಗಿದವನ ಅಪ್ಪ ತಿಕಲ ಅಂತ ಹೇಳಿ ಸಮಾಧಾನ ಮಾಡಿಕೊಂಡರು ಅಷ್ಟೇ . 

ಪರೀಕ್ಷೆ ಸಮಯದಲ್ಲಿ ಕೆಲವು ಹುಡುಗಿಯರು ಎಲ್ ಎಚ್ ನಿಂದ ಲೈಬ್ರರಿ ಗೆ ಓದಲು ಬರುತಿದ್ದರು, ಆಗ ಅವರ ಅಕ್ಕ-ಪಕ್ಕ ದಲ್ಲಿ ಕುಳಿತುಕೊಳ್ಳಲು ಪೈಪೋಟಿ ನಡೆಯುತಿತ್ತು.  ಕಂಪ್ಯೂಟರ್ ಸೈನ್ಸ್ ವಿಭಾಗದ ಕೆಬಿಸಿ ಕೂಡ ಲೈಬ್ರರಿಗೆ ಓದಲು ಬರುತ್ತಿದ್ದಳು. ಅವಳೊಡನೆ ಮಾತನಾಡಲು ಯಾರಿಗೂ ಮೀಟರ್ ಇಲ್ಲದ್ದರಿಂದ ಯಾರೂ ಅವಳ ಪಕ್ಕ ಕೂರುವ ಧೈರ್ಯ ಮಾಡುತ್ತಿರಲಿಲ್ಲ. ಯಾವತ್ತೂ ಬೇಗ ಎದ್ದು ಸ್ನಾನ ಮಾಡದ ಮಂಡ್ಯ ಪರೀಕ್ಷೆವೇಳೆಯಲ್ಲಿ ಬೇಗ ಮುಖ ತೊಳೆದು, ಪೌಡರ್ ಮತ್ತು ಡೀಯೋ  ಹಾಕಿಕೊಂಡು ಅವಳ ಪಕ್ಕದ ಬೆಂಚಿನಲ್ಲಿ ಕುಳಿತು ಮಿಕ ಮಿಕ ನೋಡುತ್ತಿದ್ದನು.  ಎಲ್ಲರಿಗು ಕ್ವಾಟ್ಲೆ ಮಾಡುತ್ತಾ ಈ ಮಂಡ್ಯ ಬರದಿದ್ದರೆ ಸಾಕು ಎನಿಸುವಷ್ಟು ಕೀಟಲೆ ಮಾಡುತ್ತಿದನು. ಆಮೇಲೆ ಬಂದು ನನ್ಮಕ್ಳ ನಿಮಗೆ ಯಾರಿಗೂ ಮೀಟರ್ ಇಲ್ಲ ಎಂದು ಒಂದು ತಿಂಗಳು ಕೊರೆಯುತ್ತಿದ್ದ.  ಅವನು ಏನೇ ಕೊರೆದರೂ 
ಅವನು ಊರಿಂದ ಬಂದಾಗ ಎಲ್ಲರಿಗು ಕಡ್ಲೆ ಮಿಠಾಯಿ ಕೊಡುತಿದ್ದ. ನಾನು ಹಾಸ್ಟೆಲ್ ನಲ್ಲಿ ಇರದಿದ್ದರೂ ಕಾಲೇಜಿಗೆ ಬಂದಾಗ ನನಗೆ ಕಾಪಾಡಿ ಇಟ್ಟು ತಿನ್ನಲು ಕೊಡುತಿದ್ದ. 

ವಿನೋದ ಕಾಲೇಜು ಮುಗಿದ ನಂತರ ಸಂಜೆ ಪ್ರತಿ ರೂಮ್ಗು ಹೋಗಿ ಭೇಟಿ ಕೊಟ್ಟು ಎಲ್ಲರನ್ನು ಮಾತನಾಡಿಸಿ ಬರುತ್ತಿದ್ದ. ಅದಕ್ಕೆ ಅವನಿಗೆ ಹುಡುಗರು ವಾರ್ಡನ್ ಎಂದು ಹೆಸರಿಟ್ಟದರು. ಹುಡುಗಿಯರ ಹಾಸ್ಟೆಲ್ನಲ್ಲಿ ಕೂಡ ನಮ್ಮ ಕ್ಲಾಸಿನ ಒಬ್ಬ ಹುಡುಗಿ ವಾರ್ಡನ್ ಇದ್ದಳಂತೆ  

ವಾರ್ಡನ್ ಎಷ್ಟು ಶಿಸ್ತಿನ ಸಿಪಾಯಿಯೆಂದರೆ, ಅವನು ಹಾಕುತ್ತಿದ್ದ ಶರ್ಟ್ ಮತ್ತು ಪ್ಯಾಂಟ್ ಐರನ್ ಆಗಿರಲೇ ಬೇಕಿತ್ತು. ಅವನು ಹಾಸಿಗೆಯ ಮೇಲೆ ಯಾರೇ ಕೂತರು ಅವನಿಗೆ ಇಷ್ಟ ಆಗುತ್ತಿರಲಿಲ್ಲ ಒಂದು ಬಫ್ ಪೇಪರ್ನಲ್ಲಿ ಒಂದು ವಾರ ಫಾರ್ಮುಲಾ ಅಥವಾ ಲೆಕ್ಕ ಪ್ರಾಕ್ಟಿಸ್ ಮಾಡುತಿದ್ದ. ಇಂತವನ ಬಳಿ ಮೊಬೈಲ್ ಹೇಗೆ ಕೇಳುವುದು ಎಂದು ರಂಗ  ತುಂಬಾ ಯೋಚ್ನೆ ಮಾಡಿ ಕೊನೆಗೆ ಧೈರ್ಯ ಮಾಡಿ ಕೇಳೇಬಿಟ್ಟ 

ರಂಗ  : ವಿನೋದ, ಹೇಗಿದ್ರು ಈಗ ರಾತ್ರಿ 11 ಗಂಟೆ ನೀನು ಮಲಗಿದ ನಂತರ ನಿನ್ನ ಮೊಬೈಲ್ ಸ್ವಲ್ಪ ಕೊಡ್ತೀಯಾ ? ಹೇಗಿದ್ರು 12 ಗಂಟೆಗೆ ನನ್ನ ಮೆಸೇಜ್ ಪ್ಯಾಕ್ ರಿನ್ಯೂ  ಆಗುತ್ತೆ. ಸ್ವಲ್ಪ ಗರ್ಲ್ ಫ್ರೆಂಡ್ ಗೆ ಮೆಸೇಜ್ ಮಾಡಬೇಕಾಗಿತ್ತು ಅಂದ. 

ವಿನೋದ : ಯಾಕೆ ನಿನ್ನ ಮೊಬೈಲ್ ಏನಾಯಿತು 

ರಂಗ  :  ಎಲ್ಲ ಮೆಸೇಜ್ ಮುಗಿದು ಹೋಗಿದೆ, ಹಿಡಿದ್ರು ನಿನ್ನ ಮೊಬೈಲ್ ನಲ್ಲಿ ಇನ್ನು 150 ಮೆಸೇಜ್ ಬಾಕಿ ಇದೆ. ಸ್ವಲ್ಪ ಬೇಗ ಕೊಡು 

ವಿನೋದ: ಅಲ್ಲ ಗುರು , ಮೆಸೇಜ್ ಇಲ್ಲ ಅಂದ್ರೆ ಸುಮ್ಮನಿರು ಬೇರೆಯವರ ಮೊಬೈಲ್ ಮೂಲಕ ಮೆಸೇಜ್ ಮಾಡೋ ಅರ್ಜೆಂಟ್ ಏನು?

ರಂಗ  : ನಿನಗೆ ಅದು ಅರ್ಥ ಆಗಲ್ಲ, ನಾನು ಅವಳಿಗೆ ಲಾಸ್ಟ ಮೆಸೇಜ್ ಮಾಡಿ ಒಂದು ಗಂಟೆ ಆಯಿತು. ನಾನು ಈಗ ಮೆಸೇಜ್ ಮಾಡಲಿಲ್ಲ ಅಂದ್ರೆ ಅವಳು ಬ್ರೇಕ್-ಅಪ್ ಮಾಡ್ಕೋ ಬಹುದು 

ವಿನೋದ: ಇದಕ್ಕೆ ನಿಮಗೆ ಗರ್ಲ್ ಫ್ರೆಂಡ್ ಬೇಕ ? ಹುಡುಗರ ಹಾಸ್ಟೆಲ್ನಲ್ಲಿ ಏನಾಯಿತು, ಯಾರು ಸ್ನಾನ ಮಾಡಿದ, ಎಷ್ಟು ಗಂಟೆಗೆ ಉಚ್ಚೆ ಮಾಡಿದೆ ಎಂದು ಹೇಳೋದಿಕ್ಕ ಮೆಸೇಜ್ ಸರ್ವಿಸ್ ಇರೋದು . 

ರಂಗ  : ಆಯಿತು ಬಿಡು, ನಿನಗೆ ಇನ್ನೊಂದು ಸರಿ ಕೇಳೋದಿಲ್ಲ. 

ವಿನೋದ: ಫೋನ್ ಮಾಡಿ ಹೇಳು, ಮೆಸೇಜ್ ಪ್ಯಾಕ್ ಮುಗಿದು ಹೋಗಿದೆ ನಾಳೆ ಮೆಸೇಜ್ ಮಾಡ್ತೀನಿ ಅಂತ . 

ಮಾರನೇ ದಿನ ಮಧ್ಯಾಹ್ನ ಊಟ ವೇಳೆಯಲ್ಲಿ ಒಂದು ಹಾವಿನ ಮರಿ ಬಂದಿತ್ತಂತೆ, ಎಲ್ಲರು ಅದನ್ನು ಓಡಿಸಿದರೆ ರಂಗ ಅದನ್ನು ಹಿಡಿಯಲು ಪ್ರಯತ್ನ ಪಟ್ಟು ನಿಜವಾದ ವಾರ್ಡನ್ ನಿಂದ ಬೈಸಿ ಕೊಡಿದ್ದ. ಈ ವಿಷಯವನ್ನು ವಿನೋದ ಪ್ರತಿಯೊಂದು ರೂಮಿಗೆ ಹೇಳಿ , ಎಲ್ಲಾರಿಗೂ ಹಾವಾಡಿಗ ಅಂದರೆ ರಂಗ ಅಂತ ಪ್ರಚಾರ ಮಾಡಿದ್ದ 

ಮಾರನೇ ದಿನ ರಂಗ ಬೆಳಗಿನ ಕ್ಲಾಸ್ ಗೆ ತಡವಾಗಿ ಹೋದಾಗ ಹುಡುಗಿಯರ ಸಾಲಿ ನಿಂದ ಮತ್ತು ಹುಡುಗರ ಕಡೇಯಿಂದ ಬುಸ್ಸು ಬುಸ್ಸು ಎಂದು ಶಬ್ದ ಬರುತ್ತಿತ್ತು.  ರಂಗ ಸಿಟ್ಟಾಗಿ ಕಪ್ಪೆ ಹುಡುಗಿಗೆ ಬೈದಿದ್ದು ಆಯಿತು. 

ಇಷ್ಟೆಲ್ಲ ನಡೆದರೂ  ಏನು ಓದದೇ ಇದ್ದರು ವಾರ್ಡನ್ ಮೊದಲನೇ ದರ್ಜೆಯಲ್ಲಿ ಪಾಸಾಗುತಿದ್ದನು. 
ಸರಿ  ತಿಂಗಳು ರಜೆ ಮುಗಿದು ಮತ್ತೆ ಕಾಲೇಜು ಶುರುವಾಯಿತು. 
ನಮ್ಮ ವಾರ್ಡನ್ ಮೊದಲನೇ ದಿನವೇ ಕಾಲೇಜಿಗೆ ಬಂದ, ನಮ್ಮ ಕ್ಲಾಸ್ನವರೇ ಆದ ಗುಮ್ಮ ಮೋಹನ, ಮೆಂಟಲ್ ದ್ರುವ ಮತ್ತು ಕಾಗೆ ದಿಲೀಪ  ಇದ್ದರು. ಇವರ  ಬಗ್ಗೆ  ನಿಮಗೆ ಹೇಳಲೇ ಬೇಕು. 

ಮೋಹನ ಬೇರೆ ಊರಿನಲ್ಲಿ ರೂಮ್ ಮಾಡಿಕೊಂಡಿದ್ದ ಅಲ್ಲಿಂದ ದಿನಾ ಬಸ್ಸಿನಲ್ಲಿ ಕಾಲೇಜಿಗೆ ಬಂದು ಹೋಗುತಿದ್ದ. ಮೆಂಟಲ್ ದ್ರುವ, ಕಾಗೆ ದಿಲೀಪ ಮತ್ತು ಸೈಕ್ ಸುದರ್ಶನ ಹಿರೀಸಾವೆಯಲ್ಲಿ ರೂಮ್ ಮಾಡಿಕೊಂಡಿದ್ದರು. ಹಾಸ್ಟೆಲ್ ನ ಹುಡುಗರು ಬೇಜಾರಾದಾಗ ಬೆಳ್ಳೂರ್ ಕ್ರಾಸ್ ನಿಂದ ಹಿರೀಸಾವೆಗೆ ಗೆ ಹೋಗುತ್ತಿದ್ದರು. ಅಲ್ಲಿರುವ ಢಾಬಾದಲ್ಲಿ ಮೆಂಟಲ್ ಗುಂಪಿನ ಜೊತೆ ರಾತ್ರಿಯ ತಿಂಡಿ ತೀರ್ಥ ಮುಗಿಸಿಕೊಂಡು ಅಲ್ಲೇ ಅಂದರೆ ಮೆಂಟಲ್ ರೂಮಿನಲ್ಲೇ ಮಲಗಿ, ಬೆಳಗ್ಗೆ ಎದ್ದು ಹಾಸ್ಟೆಲ್ ಗೆ ಬರುತ್ತಿದ್ದರು. ಕೆಲವು ಬಾರಿ ಹುಡುಗರು ಫಿಲಂ ನೋಡಲು ಚನ್ನರಾಯಪಟ್ಟಣ ಕ್ಕೆ ಕೂಡ ಹೋಗುತ್ತಿದ್ದರು ಅಲ್ಲಿ ಫಿಲಂ ನೋಡಿ ನಂತರ ಗುಮ್ಮನ ರೂಮ್ನಲ್ಲಿ ಪಾರ್ಟಿ ಮಾಡಿ ಬರುತ್ತಿದ್ದರು. ಕೆಲವು ಬಾರಿ ಹಾಸ್ಟೆಲ್ ನಲ್ಲೆ ಅಖಾಡ ನಡೆಯುತ್ತಿದ್ದವು ಅವೆಲ್ಲ ಮುಗಿಯುತ್ತಿದ್ದದು ಬೆಳಗಿನ ಜಾವ 4 -5 ಗಂಟೆಗೆ. ಅಲ್ಲಿಗೆ ಕೆಲವು ಖಾಯಂ ಗಿರಾಕಿಗಳಿದ್ದರು, ಶಿಸ್ತು ಕೂಡ ಕೆಲವು ಬಾರಿ ಅಲ್ಲಿಗೆ ಹೋಗಿ ಒಂದು ಆಟ ಮುಗಿದ ತಕ್ಷಣ ಶಿಸ್ತಾಗಿ ಎದ್ದು ಬರುತ್ತಿದ್ದ. 

ಕ್ಲಾಸ್ ರೂಮಿನಲ್ಲಿ ನಡೆಯುತ್ತಿದೆ ಪ್ರಸಂಗ ಗಳೆ ಬೇರೆ.  ಮೆಂಟಲ್ ಕ್ಲಾಸ್ಸಿನಲ್ಲಿ ಕ್ಯೂ ಕ್ಯೂ  ಎಂದು ಕೂಗಿದ್ದು ಅದು ಕೂಗಿದ್ದು ಕಾಡು ಕೊತ್ತನಹಳ್ಳಿ ದೆವ್ವಕ್ಕೆ ಆದ್ರೆ ಕೇಳಿಸಿದ್ದು ಕವಿತಾ ಮೇಡಂಗೆ , ಅವರು ನನಗೆ ಮತ್ತು ಮೆಂಟಲ್ ಗೆ  ಕ್ಲಾಸಿನಿಂದ ಹೊರಗೆ ಹೋಗಬೇಕ ಎಂದು ಎಚ್ಚರಿಕೆ ಕೊಟ್ಟರು ನಮಗೆ ಆ ಎಚ್ಚರಿಕೆ ಬರಲಿಲ್ಲ ಎನ್ನುವುದು ಬೇರೆ ವಿಷಯ. 

ಒಂದು ದಿನ ಅವರು ಪಾಠ ಮಾಡುತ್ತಿದ್ದಾಗ ಕ್ಲಾಸಿನಲ್ಲಿ ಹುಡುಗರ ಕಡೆಯಿಂದ ಗಲಾಟೆ ನಡೆಯುತಿತ್ತು, ಅವರು ಎಷ್ಟು ಬಾರಿ ಸೈಲೆಂಟ್ ಸೈಲೆಂಟ್ ಎಂದು ಕೂಗಿದರೂ ಗಲಾಟೆ ಕಡಿಮೆಯಾಗಲಿಲ್ಲ ಕೊನೆಗೆ ಅವರು ಸಿಟ್ಟಾಗಿ " ನಿಮ್ಮ ತಲೇಲಿ ಸಾಮಾನಿಲ್ವಾ " ಅಂದರು ನಂತರ ನಗು ಮತ್ತು ಗಲಾಟೆ ಇನ್ನು ಹೆಚ್ಚಾಯಿತು . ಕೆಲವು ಗ್ರಾಮ್ಯ ಪದಗಳು ಉಂಟು ಮಾಡುವ ಅವಾಂತರ ಕಡಿಮೆಯಲ್ಲ. 

ರಾ ರಾ ಕ್ಲಾಸ್ ಗೆ ಬಂದಾಗ ಮಂಡ್ಯ ಸಾರ್ ಸಾರ್ ಫ್ಯಾನ್ ಆಫ್ ಮಾಡಿ ಇಲ್ಲ ಅಂದ್ರೆ ಅವಳು ಹಾರಿ ಹೋಗ್ತಾಳೆ ಎಂದು ಕೂಗಿದ್ದು, ಪೈ ಬಂದಾಗ 'ಸೌಪೈ'  'ಸೌಪೈ' ಎಂದು ಕೂಗಿದ್ದು. ಕಾಡಮ್ಮ ಬಂದಾಗ ಯಾರಿಗೂ ಕೂಡ ಮೀಟರ್ ಇರುತ್ತಿರಲಿಲ್ಲ ಕೂಗು ಹಾಕೋಕೆ, ಕಾಡು ಕೂಡ ಸುಮ್ನೆ ಕೂತಿರುತ್ತಿದ್ದ.  

ಒಂದು ಗುಂಪು ಅನುಮತಿಯಿಲ್ಲದೆ ಟೂರ್ ಗೆ ಹೋದದ್ದು,  ಹೋಗುವಾಗ ಕಾಲೇಜಿನ ಮುಂದಿನ ಕಾಂಪ್ಲೆಕ್ಸ್ ನಲ್ಲಿ ಪಟಾಕಿ ಹೊಡೆದು ಹೋದದ್ದು ಈ ವಿಷಯ HOD ಗೊತ್ತಾಗಿ ಅವರು ಟೂರ್ ಗೆ ಹೋದ ಎಲ್ಲರನ್ನು ಸಸ್ಪೆಂಡ್ ಮಾಡಿದ್ದು ನಂತರ ಒಂದು ವಾರದ ಬಳಿಕ ಮತ್ತೆ ಕ್ಲಾಸ್ ಗೆ ಸೇರಿಸಿದ್ದು ಅಧಿಕೃತ ಆದರೆ ಲಾಂಗ್ ವೀಕೆಂಡ್ ನಲಿ ರೋಮಿಯೋ ಜ್ಯೂಲಿಯೆಟ್ ಗಳ ಜೋಡಿ ಗುಂಪು ಸದ್ದಿಲದೆ ಟ್ರಿಪ್ ಮುಗಿಸಿಕೊಂಡು ಬಂದರು. ಅದಕ್ಕೆ ಹೇಳುವದು ಕತ್ತೆ ಕೂಡ ಕೆಲಸ ಮಾಡುತ್ತದೆ ಆದರೆ ಸ್ಮಾರ್ಟ್ ಆಗಿ ಕೆಲಸ ಮಾಡಬೇಕೆಂದು.  ಪಾಪ ಆ ಜೋಡಿ ಗುಂಪಿನಲ್ಲಿ ಒಂದು ಜೋಡಿ ಮಾತ್ರ ಮದುವೆಯಾಯಿತು ಉಳಿದವರು ಗುಪ್ತಪದ ವಾದರು (ಪಾಸ್ವರ್ಡ್) ಇಲ್ಲ ಮಗನ ಅಥವಾ ಮಗಳ ಹೆಸರಾದರು. 

ಮುಂದುವರಿಯುವುದು ......  ಯಾಕೆಂದರೆ ನೆನಪುಗಳು ಇನ್ನು ಮುಗಿದಿಲ್ಲ 





Monday, December 21, 2020

ದಿ ಮ್ಯಾನ್ ಕಂಪನಿ - 'ಯದ್ ಭಾವಂ ತದ್ ಭವತಿ' 

 



​​
 ಅದು ಸಮಯ ಸುಮಾರು ಸಂಜೆ 4ಗಂಟೆ, ಶನಿವಾರವಾದ್ದರಿಂದ  ಜನರ ಮತ್ತು ಸಿಬ್ಬಂದಿಗಳ ಓಡಾಟ ಕಡಿಮೆ ಇತ್ತು, ಆದರೆ ನೀರಗುಂಡಿ ಸ್ವರಸದ ಪ್ರಕೋಪ ತುಸು ಜಾಸ್ತಿ ಅನ್ನುವಷ್ಟೇ ಇತ್ತು. 

ಇಂದು ಶನಿವಾರ, ನಾಳೆ ಬಾನುವಾರ ಆದ್ದರಿಂದ ಡಾಕ್ಟರ್ ಗೆ ಏನು ಮಾಡುವುದು ಎಂದು ಮಗ ಯೋಚಿಸುತ್ತಿದ್ದ, ಕರೋನದ ಸಮಯದಲ್ಲಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವದಿರಲಿ, ಅಲೋಪಥಿಯ ವೈದ್ಯರನ್ನು ಭೇಟಿ ಮಾಡುವುದು ಸುಲಭವಾಗಿರಲಿಲ್ಲ. ಕರೋನ ರಕ್ತ ಪರೀಕ್ಷೆಗೆ ಹಣ ಪೀಕುವುದು ಬಹುತೇಕ ಸಾಮಾನ್ಯವಾಗಿತ್ತು. ಪ್ರತಿಯೊಂದು ಕಾಯಿಲೆಗೂ ಶೀಘ್ರ ಔಷದಿ ಕೊಡುವುದು  ಅಲೋಪಥಿಯವರ ಅಭ್ಯಾಸವಾದರೆ. ಏನೂ ಕೊಡದೆ ಸುಮ್ಮನಿದ್ದು ನೋಡುವುದು ಆಯುರ್ವೇದದ ಪದ್ಧತಿ. 

ಪದೇ ಪದೇ ತೇಗು , ವಾಕರಿಕೆಗೆ ದೇಹ ಬಳಲುತ್ತಾ ಸಾಗಿತ್ತು ಆದರೆ ಸಿಕ್ಕಿದು ಬಿಸಿನೀರು ಕುಡಿಯಿರಿ ಎನ್ನುವ ಸಲಹೆ. ಆಗ ಬಂದ ಯುವ ವೈದ್ಯೆಯೊಬ್ಬರು ಅಮ್ಮನನ್ನು ನೋಡಿ ಸ್ವಲ್ಪ ವಾಕ್ (ಕನ್ನಡದಲ್ಲ ಇಂಗ್ಲಿಷ್ walk) ಮಾಡಿ ಎಂದರು. 
ಮಾರನೇ ದಿನ ತಮಗೆ ಕರ್ತವ್ಯವಿರದಿದ್ದರೂ ಕೂಡ ನಮ್ಮನ್ನು ನೋಡಲು ಬಂದು, ಕ್ಷೇಮ ವಿಚಾರಿಸಿ, ಧೈರ್ಯ ತುಂಬಿ ಏನಾದರು ತೊಂದರೆ ಇದ್ದರೇ ನನಗೆ ಫೋನ್ ಮಾಡಿ ಎಂದು ತಮ್ಮ ಮೊಬೈಲ್ ನಂಬರ್ ಕೊಟ್ಟು ಹೋದರು.  

ಇದಕ್ಕಿಂತ ಮೊದಲು ಎಲ್ಲ ಯುವ ವೈದ್ಯರ ಬಗ್ಗೆ ನನಗಿದ್ದ ಭಾವನೆಯೆಂದರೆ ಹುಡುಗಾಟದ ವೈದ್ಯರು ಕಾಟಾಚಾರಕ್ಕೆ ರೌಂಡ್ಸ್ ಗೆ ಬಂದು ನಂತರ ಮೊಬೈಲ್ನಲ್ಲಿ ಸಮಯ ಕೊಲ್ಲುತ್ತಾರೆ ಅವರಿಗೆ ರೋಗಿಯ ನೋವು ಅರ್ಥವಾಗುವುದಿಲ್ಲ ಎಂಬ ಬಾವನೆಯಲ್ಲೇ ಇದ್ದೆ 

ಇದರ ಪರಿಣಾಮ ಮೊದಲು ತಾಗಿದ್ದು ಅವರು ಮೊದಲ ದಿನ ಬಂದು ನಮ್ಮ ಮಾಹಿತಿಗಳನ್ನು ರೋಗಿಗಳ ಫೈಲ್ಗೆ ಗೆ ತುಂಬುತ್ತ ಇದ್ದಾಗ.  ನಾನು ಎಲ್ಲ ಮಾಹಿತಿಯನ್ನು ಕಾಟಾಚಾರಕ್ಕೆ ಹೇಳುತ್ತಿದ್ದೆ.  ಇವರು ಯಾವ ಮಹಾ ವೈದ್ಯರು ಎಂಬ ನನ್ನ ವರ್ತನೆ ನನಗೆ ಈಗ ಅಸಹ್ಯ್ಯ ಹುಟ್ಟಿಸುವಂತಿತ್ತು. ನಾನು ಕೇವಲ ದುರಹಂಕಾರದ ವ್ಯಕ್ತಿಯಾಗಿದ್ದೆ ನಾನು ದೊಡ್ಡ ಶಿಕ್ಷಿತ ಹಾಗೂ ತಿಳಿದವನೆಂಬ ಭ್ರಮೆ ನನ್ನನ್ನು ಸುತ್ತುವರೆದಿತ್ತು. 

ನಂತರ ಆ ಯುವ ವೈದ್ಯೆ ಪ್ರತಿ ದಿನ ಅಮ್ಮನನ್ನು ನೋಡಲು ಬಂದು ಅಮ್ಮನ ಅರೋಗ್ಯ ವಿಚಾರಿಸಿ, ಕೆಲವು ಸಲಹೆಗಳನ್ನು ನೀಡಿ ವಾಪಸಾಗುತ್ತಿದ್ದರು.  ಅನೇಕ ವೇಳೆ ನನ್ನ ಎಲ್ಲ ಪ್ರಶ್ನೆಗಳಿಗೆ ಬಹು ತಾಳ್ಮೆಯಿಂದ ಉತ್ತರಿಸಿ ಹೋಗುತ್ತಿದ್ದರು. ಬದುಕೆಂದರೆ ಸಾಧನೆ, ಪೈಪೋಟಿ, ಸೇಡು ತೀರಿಸಿಕೊಳ್ಳುವ ಅವಕಾಶ ಎಂದು ಕೊಂಡಿದ್ದವನಿಗೆ ; ಸಮಾಧಾನ, ತಾಳ್ಮೆ ಮತ್ತು ಸಹಾಯ ಸುಂದರವಾದ ಜೀವನದ ಸೋಪಾನ ಎಂಬ ಅಂಶ ಮನಸ್ಸಿಗೆ ನಾಟಲು ಶುರುವಾಯಿತು. 

ಪ್ರತಿಬಾರಿ ಯುವ ವೈದ್ಯೆ ಬಂದಾಗಲೂ ಅಮ್ಮನ ಅರೋಗ್ಯ ವಿಚಾರಿಸುತ್ತಿದ್ದರು; ಅಮ್ಮನಂತೂ ಅವರು ಒಂದು ದಿನ ಬರದೇ ಹಾಗೆ ಹಾಸ್ಟೆಲ್ ಗೆ ಹೋದಾಗ ಇವತ್ತು ಬರಲೇ ಇಲ್ಲ ಅಂತ ಹೇಳುತ್ತಿದ್ದರು; ಆದರೆ ಬೇರೆ ಚಿಕಿತ್ಸೆಗಳ ನಡುವೆ ಬೆಳಗಿನಿಂದ ಸಂಜೆವರೆಗೂ ಸಮಯ ಕಳೆದು ಹೋಗುತ್ತಿತ್ತು.  ಮರಳಿನ ಶಾಖ ಕೊಡುವ ಸಿಬ್ಬಂದಿ ಕೂಡ ಅಮ್ಮನ ಬಗ್ಗೆ ಬಾರಿ ಕಾಳಜಿ ವಹಿಸುತ್ತಿದ್ದರು; ಅಮ್ಮನಂತೂ ಈ ಆಸ್ಪತ್ರೆ ಬೇರೆ  ಆಸ್ಪತ್ರೆಗಳಂತಲ್ಲ; ಇಲ್ಲಿಯ ಎಲ್ಲಾ ಸಿಬ್ಬಂದಿ ಮನ ಇರುವ ಮನುಜರು ಎಂದು ತಮಗೆ ಕರೆ ಮಾಡಿದವ್ರೆಲ್ಲರಿಗೂ ಹೇಳುತ್ತಿದ್ದರು.  ಇದೆಲ್ಲದರ ಮದ್ಯೆ ತಿಂಡಿ - ಊಟ ಸಮಯ ಬಂದಾಗ ಅಮ್ಮ ಮುಖ ಸಣ್ಣಗೆ ಮಾಡುತ್ತಿದ್ದರು. ಕ್ಯಾಂಟೀನ್ ನವನು ಕೊಡುವ ಊಟ ತಿಂಡಿಯಲ್ಲಿ ಏನು ಇರುತ್ತಿರಲಿಲ್ಲ. ಅಡಿಗೆಯಲ್ಲಿ ಎಲ್ಲರಿಗು ಗುರುವಾದ ಅಮ್ಮನಿಗೆ ಏನು ಮಾಡಿದರು ಇಲ್ಲಿಯ ಊಟ ಪೂರ್ತಿ ತಿನ್ನಲು ಆಗುತ್ತಿರಲಿಲ್ಲ.  ಕ್ಯಾಂಟೀನ್ ನ ಅಡುಗೆ ಭಟ್ಟ ಎಲ್ಲಿ ಅಡುಗೆ ಕಲಿತ ಎನ್ನುವುದು ಅವರ ನಿತ್ಯದ ಪ್ರಶ್ನೆಯಾಗಿತ್ತು.  ಇಷ್ಟು ಕೆಟ್ಟದಾಗಿ ಅಡುಗೆ ಮಾಡಲು ಸಾಧ್ಯವೇ ಇಲ್ಲ. ಇದು ಉದ್ದೇಶಪೂರ್ವಕ ಕೆಲಸ ಎಂಬುದು ಅವರ ನಂಬಿಕೆ 

ಸಂಜೆ ಎಲ್ಲ ಚಿಕಿತ್ಸೆ ಮುಗಿದ ಬಳಿಕ, ಅಲ್ಲಿನ ಪಾರ್ಕಿನಲ್ಲಿ ತಿರುಗಾಡುವುದು ಒಂದು ರೂಢಿಯಾಗಿತ್ತು, ಅಲ್ಲಿನ ಸಸ್ಯವನದಲ್ಲಿ ತಿರುಗುತ್ತ, ಕಾಲೇಜಿನ ಮುಂದೆ ಸಾಗಿ, ಲೇಡೀಸ್ ಹಾಸ್ಟೆಲ್ ಬರುವ ಮುಂಚೆ  U ಟರ್ನ್ ತೆಗೆದುಕೊಂಡು ಅಲ್ಲಿನ  ಸಿಮೆಂಟ್ ಬೆಂಚ್ನಲ್ಲಿ ಕುಳಿತು ಸ್ವಲ್ಪ ಸಮಯದ ನಂತರ ಸುಮಾರು  6 - 6.30ಕ್ಕೆ ಮತ್ತೆ ವಾರ್ಡಿಗೆ ಬರುವುದು ನಮ್ಮಗಿದ್ದ ಒಂದೇ ದಾರಿ. 

ಒಂದು ದಿನ ಹಾಸ್ಟೆಲ್ನ ಕೆಲವು ಉತ್ತರ ಭಾರತದ ಹುಡುಗಿಯರು; ಕ್ಯಾಂಟೀನ್ ನವನ ಬಳಿ " ಬೈಯ್ಯ, ಭೇಲ್ ಪೂರಿ ಕರೋಗೆ" ಅಂತ ಕೇಳುತ್ತ ಇದ್ದರು ಅವನು ಇಲ್ಲ ಅಂದ. ಇದನ್ನು ಕೇಳಿಸಿಕೊಂಡ ಅಮ್ಮ ಕಾಲೇಜನ ಹುಡುಗಿಯರಿಗೆ ಚಾಟ್ಸ್ ಬೇಕು ಪಾಪ ಇಲ್ಲಿ ಏನು ಇಲ್ಲ ಅಂತ ಬೇಜಾರು ಮಾಡಿಕೊಂಡಿದ್ದು ಆಯಿತು. 

ಅಲ್ಲಿರುವ ತುಂಬಾ ಯುವ ವೈದ್ಯ ಮತ್ತು ವೈದ್ಯೆಯರು ಮೈಸೂರಿನಲ್ಲಿ ಮನೆ ಮಾಡಿಕೊಂಡು ಅಥವಾ ಪೇಯಿಂಗ್ ಗೆಸ್ಟ್ ಆಗಿ ಬಂದು ಹೋಗುವುದು ಮಾಡುತ್ತಾರೆ. ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಹಾಸ್ಟೆಲ್ನಲ್ಲಿ ಇದ್ದಾರೆ.  "ಕಾಲೇಜು ಲೈಫ್ ಇಸ್ ಗೋಲ್ಡನ್ ಲೈಫ್ " ಎನ್ನುವುದು ಎಲ್ಲಾ ಸೀನಿಯರ್ ಗಳು, ಮನೆಯ ದೊಡ್ಡವರು ಹೇಳಿ ಕೊಟ್ಟ ಮಂತ್ರ ಇದನ್ನು ಬೇರೆ ತರಹ  ತಿಳಿದುಕೊಂಡು ಬದುಕಿನ ಹಳಿ ತಪ್ಪಿದವರು ಎಷ್ಟಿಲ್ಲ? ಹಾಸ್ಟೆಲ್ನಲ್ಲಿ ಇರುವುದು ಒಂದು ಸಾಧನೆಯೇ ಸರಿ ಏಕೆಂದರೆ  ಅಲ್ಲಿ ಚಾಟ್-  ಐಸ್ ಕ್ರೀಮ್ ಸಂಜೆಗಳು, ಹುಟ್ಟುಹಬ್ಬದ ಪಾರ್ಟಿಗಳು, 
ಗೆಳೆಯನ / ಗೆಳತಿಯ ಜೊತೆ ಜಾಲಿ ರೈಡ್ಗಳು ಇರುವುದಿಲ್ಲ. ಸಾಲ ಮಾಡಿಯಾದ್ರು ತುಪ್ಪ ತಿನ್ನೊದಿಕ್ಕೆ ಹಾಸ್ಟೆಲ್ ನ  ವಾರ್ಡನ್ ಗಳು ಬಿಡುವುದಿಲ್ಲ. 

ಹೀಗಿರುವಾಗ ಹಾಸ್ಟೆಲ್ನಲ್ಲೇ ಊಟ ಮಾಡಿ;  ಅಲ್ಲೇ ಇದ್ದು ಕರ್ತವ್ಯ ನಿರ್ವಹಿಸುವುದು  ಸಾಮಾನ್ಯ ಮಾತಲ್ಲ. ವಯಸ್ಸಿಗನುಗುಣವಾದ ಆಸೆಯನ್ನೆಲ್ಲ ಮೀರಿ ಯೋಗಿನಿಯಂತೆ ಬದುಕುವುದು ಸಾಮಾನ್ಯರಿಗೆ ಕಷ್ಟ .  विद्यातुराणां न सुखं न निद्रा  ಅನ್ನೋದೇನೋ ಸರಿ.  ಆದರೆ ಇಷ್ಟೊಂದು ಶಿಸ್ತು ಮತ್ತು ನೇಮ ? 





ಸರಿ ಹಾಗು ಹೀಗೂ ಒಂದು ವಾರ ಕಳೆದ ನಂತರ, ನಾವು ಹೊರಡುವ ಸಮಯ ಬಂದಾಗ ನಾನು ಗಮನಿಸಿದ ಅಂಶವೆಂದರೆ ಹೊರಡುವ ದಿನ ಆ ಯುವ ವೈದ್ಯರು ಬರಲೇ ಇಲ್ಲ.  ಅವರಿಗೆ ಒಂದು ಧನ್ಯವಾದ ಅರ್ಪಿಸಿ ಹೋಗುವ ಎಂದು ಅಂದುಕೊಡಿದ್ದು ನಡೆಯಲೇ ಇಲ್ಲ.  

ಅವರಿಗೆ ಮೊಬೈಲ್ ಮೂಲಕ ಕಳುಹಿಸಿದ ಸಂದೇಶಗಳಿಗೆ ಒಂದು ವಾಕ್ಯದಲ್ಲೇ ಉತ್ತರ ಬರುತ್ತಿತ್ತು. ವಾಕ್ ಮಾಡಿ ಎಂದವರಿಗೆ ವಾಕ್ (ಕನ್ನಡದ ವಾಕ್ ) ಮಾಡಲು ಕಷ್ಟವೇ? ಇಲ್ಲ ಯೋಗಿನಿಯ ಭಾವ ಹೀಗೆಯೇ ?

ತಾವು ಮತ್ತೊಮ್ಮೆ ಈ  ಲೇಖನದ ಶೀರ್ಷಿಕೆ ಓದಲು ವಿನಂತಿ 










































ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...