ಟೀಂ ಔಟಿಂಗ್ ಎನ್ನುವ ಹೆಸರಲ್ಲಿ ಪ್ರವಾಸ ಮಾಡುವ ಯೋಚನೆ ಹೊಳೆದಿದ್ದೇ ತಡ, ಮೈ-ಮನಸುಗಳು ಪುಲಕಿತವಾಗಿ ಸ್ಥಳ ಆಯ್ಕೆಯ ಕಾರ್ಯವು ಶುರುವಾಯಿತು. ಒಟ್ಟು 7 ಜನರಿರುವ ನಮ್ಮ ತಂಡಕ್ಕೆ ಸೂಕ್ತವಾದ ಸ್ಥಳದ ಆಯ್ಕೆ ಅಷ್ಟು ಸುಲಭ ವಾಗಲಿಲ್ಲ. ರೆಸಾರ್ಟ್ಗೆ ಹೋಗಿ ದಿನ ಕಳೆಯುವ ಎಂದು ಒಬ್ಬ ಪಾನಮಿತ್ರ ಹೇಳಿದರೆ, ಮತ್ತೊಬ್ಬ ಕಾಡು ಸುತ್ತುವ ಎಂದ, ಮಗದೊಬ್ಬ ವಾಟರ್ ಪಾರ್ಕ ಗೆ ಹೋಗಿ ಆಟ ಆಡುವ ಎಂದ.ಮದುವೆ ನಿಶ್ಚಯವಾದ ಮದುಮಗನೊಬ್ಬ BBQ Nation ಹೋಟೆಲ್ ಹೋಗಿ ಹೊಟ್ಟೆ ಬಿರಿಯುವಷ್ಟು ತಿನ್ನುವ ಎನ್ದ.
ಹೀಗೆ ಪ್ರವಾಸದ ಸ್ಥಳವು ಪ್ರಯಾಸವಾಗುತ್ತಾ, ತಲೆ ಕೆಡಿಸಲು ಶುರುಮಾಡಿತು. ಸರಿ ಎಲ್ಲರ ಅವಶ್ಯಕತೆಗಳನ್ನು ಸಮಾದಾನ ಪಡಿಸುವ ಸ್ಥಳ ಕೊನ್ನೆಗೂ ಸಿಕ್ಕಿತು. ಮುಂಬೈನಿಂದ ಬೇಗ ತಲುಪಲು ಸಾಧ್ಯವಾಗುವ 'ಅಲಿಬಾಗ್ ' ನಮ್ಮ ಸರ್ವ ಸಮ್ಮತ ಆಯ್ಕೆಯಾಯಿತು.
ಅಲಿಬಾಗ್ ನಲ್ಲಿ ನೋಡಬೇಕಾದ, ವಾಸ್ತವ್ಯದ ವಿವರಗಳು ಗೂಗಲ್ ಹುಡುಕಾಟದ ಇಂಜಿನ್ ನಲ್ಲಿ ಸುಲಭವಾಗಿ ಸಿಕ್ಕವು. ಅಲ್ಲಿಯ ಹೋಂಸ್ಟೇ ಯೊಂದನ್ನು ನಡೆಸುತ್ತಿರುವ ವ್ಯಕ್ತಿಯೊಡನೆ ಫೋನಿನಲ್ಲಿ ಮಾತುಕತೆಯಾಗಿ, 2 ರೂಮಿರುವ ಮನೆಯು ಕೇವಲ 3000/- ರೂ ಗಳಿಗೆ ನಿಗದಿಯಾಯಿತು. ಅಲಿಬಾಗ್ ಕೊಂಕಣ ತೀರದ ಒಂದು ಊರಾದ್ದರಿಂದ ಮರಾಟಿಯು ಪ್ರಮುಖ ಬಾಷೆ ಆದರೂ ಕೂಡ ಇಲ್ಲಿನ ಜನ ಹಿಂದಿ ಬಾಷೆಯಲ್ಲಿ ಕೂಡ ಮಾತನಾಡುತ್ತಾರೆ.
ಸರಿ. ಹೊರಡುವ ಎಲ್ಲ ತಯಾರಿಗಳು ಶುರುವಾಗಿ, ಮೀಟಿಂಗ್ ರೂಂನಲ್ಲಿ ಗಂಟೆ-ಗಂಟೆಗಟ್ಟಲೆ ಕಾರ್ಯತಂತ್ರಗಳು, ಪ್ರವಾಸಕ್ಕೆ ಫ್ಲೋ ಚಾರ್ಟ್ (flow chart) ಕೂಡ ತಯಾರಾಯಿತು. ಬಹುಶ: ಸಣ್ಣ ಕಾರ್ಯವನ್ನು ದೊಡ್ಡದಾಗಿ ಮಾಡುವ ಕಾರ್ಪೊರೇಟ್ ಶೈಲಿಯು ನಮಗೆ ಒಳ್ಳೆಯ ಟೈಂಪಾಸ್ ಮಾಡಿಸಿದವು.
ಸರಿ ಹೊರಡುವದಿನ ಬಂದೇ ಬಿಟ್ಟಿತು, ನಿಗದಿಯಾದಂತೆ ಬೆಳಗಿನ 7 ಗಂಟೆಗೆ ಎಲ್ಲರು ಗೇಟ್ ವೇ ಆಫ್ ಇಂಡಿಯಾದಲ್ಲಿ ಸೇರಿ,8 ಗಂಟೆಗೆ AC ಇರುವ ದೋಣಿ ಹತ್ತಿದೆವು, ಮೇಲಿನ ಮಹಡಿಯಲ್ಲಿ ನಿಗದಿಯಾಗಿದ್ದ ಆಸನಗಳು ಆರಾಮದಾಯಕವಾಗಿದ್ದವು. ಬಹುಶ: ಪ್ರತಿಯೊಂದು ಜಾಗದಲ್ಲಿ AC ಬೇಕು ಅನ್ನುವುದು, ಮಾಹಿತಿ ತಂತ್ರಜ್ನರ ಒಣ ಪ್ರತಿಷ್ಠೆಯೇ ? ಅಥವಾ ಮೀನಿನ ಜೀವನವೇ ? ಸರಿ ಒಣ ಪುರಾಣವನ್ನು ಬದಿಗಿಟ್ಟು ಪ್ರವಾಸ ಮುಂದುವರೆಸೋಣ.ಗೇಟ್ ವೇ ಆಫ್ ಇಂಡಿಯ ದಿಂದ ಮಾಂಡವ ಜೆಟ್ಟಿಗೆ ಸುಮಾರು ಒಂದು ತಾಸಿನ ಸಮುದ್ರಯಾನ. ಅರಬ್ಬೀ ಸಮುದ್ರವು ಶಾಂತವಾಗಿದ್ದ ಕಾರಣ ಹೆಚ್ಚಿನ ಅಲೆಗಳ ಏರಿಳಿತವಿರಲಿಲ್ಲ ಸುಮಾರು 11 ಗಂಟೆಗೇ ಮಾಂಡವ ಜೆಟ್ಟಿ ತಲುಪಿ ಅಲ್ಲಿಂದ ಟಂ ಟಂ ಆಟೋ ಹತ್ತಿ ಅಲಿಬಾಗ್ ತಲುಪಿದೆವು. ಮಾಂಡವ ಜೆಟ್ಟಿಯಿಂದ ಅಲಿಬಾಗ್ ಗೆ 400/- ರೂಗಳ ಆಟೋದರವಿದೆ.
ನಮ್ಮ ಹೋಂಸ್ಟೇ ತಲುಪಿ ಮತ್ತೆ ತಯಾರಾದ ನಂತರ ಅಲ್ಲೇ ಹತ್ತಿರವಿದ್ದ ವರ್ಸೋಲಿ ಸಮುದ್ರತೀರ ನೋಡಲು ಹೋದೆವು, ಅಲ್ಲಿ ಅಲೆಗಳ ಅಬ್ಬರನೋಡಿ ನಾನ೦ತೂ ಅಚ್ಚರಿಗೊಂಡೆನು. ಸಮುದ್ರದ ಏರಿಳಿತ ಚಂದ್ರನ ಹಾಗು ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೊಂದಿರುವ ಸಂಬಂದ ನಿಜಕ್ಕೂ ವಿಸ್ಮಯಕಾರಿ. ಸಮುದ್ರವು ಏರುತ್ತಿದ್ದ ಕಾರಣ ದೂರದಿಂದಲೇ ನೋಡಿ ವಾಪಸಾದೆವು.
ಬೆಳಗ್ಗೆಯಿಂದ ಸರಿಯಾಗಿ ತಿಂಡಿ ತಿನ್ನದ ಕಾರಣ ಹೊಟ್ಟೆ ಚುರುಗುಡುತಿತ್ತು, ಹೋಂಸ್ಟೇಯಲ್ಲಿ ಏಕಾದಶಿಯಾದ ಕಾರಣ ಮಾಂಸಾಹಾರ ಅಡಿಗೆಯಿರಲಿಲ್ಲ, ಸರಿ ಏಕಾದಶಿಯೆಂದು ಸುಮ್ಮನಿರಲಾದಿತೆ ? ಹತ್ತಿರದ ಹೋಟೆಲ್ ನ ನಂಬರ್ ಹುಡುಕಿ, ಮೂವರಿಗೆ ಮೀನಿನ ಊಟವನ್ನು ಆರ್ಡರ್ ಮಾಡಿಯಾಯಿತು, ಮಾಂಸ ತಿನ್ನುವ ಮನಸಿದ್ದರೂ ಏಕಾದಶಿಯ ಹೆದರಿಕೆಯಿಂದಲೋ ಅಥವ ಸಂಸ್ಕಾರ(?)ದಿಂದ ಸಸ್ಯಾಹಾರಿ ಊಟವನ್ನು ಉಳಿದ ಮೂವರು ಅಲ್ಲೇ ಮಾಡಿದರು.
ಸಂಜೆ ಮತ್ತೆ ಸಮುದ್ರ ತಲುಪಿದ ನಾವು ಕೆಲಸ, ಪ್ರಾಜೆಕ್ಟ್ , ಡೆಡ್ಲೈನ್ ಎಲ್ಲಾ ಮರೆತು, ನೀರಿನಲ್ಲಿ ಬಿದ್ದು ಹೊರಳಾಡಿದೆವು. ಇರುವುದರಲ್ಲಿ ವರ್ಸೋಲಿ ಬೀಚ್ನಲ್ಲಿ ಜನ-ಜಂಗುಳಿಯಿಲ್ಲ ಹಾಗೂ ಅಂಗಡಿಗಳ ಕಾಟವಿಲ್ಲ. ಇರುವುದು ಎರಡೇ ಅಂಗಡಿ ಒಂದು ಗೋಲ ಮಾರುವ ಮತ್ತೊಂದು ತಿಂಡಿಯ ಸಣ್ಣ ತಳ್ಳುಗಾಡಿ.
ಸಮುದ್ರದ ನೀರು ಮತ್ತು ಮರಳು ನಮ್ಮ ದೇಹ ಮತ್ತು ಬಟ್ಟೆಗಳೆರಡನ್ನು ತೋಯಿಸಿ, ನಮ್ಮ ಅಹಂಕಾರವನ್ನು ಕೂಡ ಮರೆಸಿದ್ದವು. ಸೂರ್ಯ ಮುಳುಗುವತನಕ ನೀರಿನಲ್ಲಿ ಆಟ ಆಡಿ ದಣಿದ ಬಳಿಕ ನಾವು ಹೋಂಸ್ಟೇಗೆ ಮರಳಿದೆವು
ಹೋಟೆಲ್ ಗೆ ಮರಳಿದ ಬಳಿಕ ಸಂಜೆಗೆ ರಂಗು ಬಂದಿತು! ಏಕಾದಶಿಯ ಕಾರಣ ಸಂಜೆಯ ರಂಗಿನ ಜೊತೆಯಾಗಲು ಮತ್ತೆ ಹೋಟೆಲ್ ನಿಂದಲೇ ಆರ್ಡರ್ ಮಾಡಬೇಕಾಯಿತು, ಮದ್ಯಾನ್ಹದ ಸಸ್ಯಾಹಾರಿಗಳು ಸಂಜೆಗೆ ಮತ್ತೆ ಮಾಂಸಹಾರಿ ಗಳಾಗಿದ್ದರು. ಸಂಜೆಯ ರಂಗು ರಾತ್ರಿಯ ಬಹು ಹೊತ್ತಿನವರೆಗೂ ನಡೆಯಿತು ಮಧ್ಯೆ ಮದ್ಯದ ಜೊತೆಗೆ ಊಟ. ರಾತ್ರಿ ಬಹು ಹೊತ್ತಿನವರೆಗೂ ಮಾತು- ಹಾಸ್ಯ, ಕೀಟಲೆ ಹಾಗೂ ಕಾಳೆಯುವ ಚಟಾಕಿಗಳು ನಡೆದವು. ಎಲ್ಲರೂ ತಣ್ಣಗಾಗಿ ಮಲಗಿದಾಗ ಬೆಳಗಿನ ಜಾವ 3 ಗಂಟೆ.
ಬೆಳಿಗ್ಗೆ ಎದ್ದು ತಿಂಡಿ ತಿಂದು, ಮತ್ತೆ ಸಮುದ್ರ ದರ್ಶನ ಮಾಡಿ ಬಂದೆವು, ಅದೇನೋ ಸೆಳೆತ ಸಮುದ್ರವೆಂದರೆ, ಇರುವುದೆಲ್ಲವ ಬಿಟ್ಟುಇರದುದರೆಡೆಗೆ ತುಡಿವುದೇ ಜೀವನ. ಎಲ್ಲ ಇದ್ದರು ಬೇರೇನೋ ಬೇಕು ಅನ್ನುವ ಹಂಬಲವೆ ನಮ್ಮ ಉನ್ನತಿಗೆ ಸಾಧನವೇ?
ಮೀನಿನ ಊಟ ಮಾಡಿ ಹೋಂಸ್ಟೇಯ ಮಾಲಿಕರಿಗೆ ಅವರ ಉಪಚಾರ ಪ್ರೀತಿಗೆ ಧನ್ಯವಾದ ಹೇಳಿ ಮತ್ತೆ ದೋಣಿಯಿಂದ ಮುಂಬೈ ತಲುಪಿದೆವು. ಮನದಲ್ಲಿ ನಾಳೆ ಆಫೀಸ್ಗೆ ಹೋಗ ಬೇಕು ಎನ್ನುವ ಚಿಂತೆಯೇ ತುಂಬಿ ರಾತ್ರಿ ಊಟ ಸೇರದೆ ಮಲಗಿದ್ದಾಯ್ತು.
ಮತ್ತೆ ಮುಂದಿನ ಪ್ರವಾಸದ ನಕ್ಷೆ ತಯಾರು ಮಾಡುವ ಯೋಚನೆಯಲ್ಲಿ ನಾವೀಗ ಇದ್ದೆವೆ.
ಮುಂದಿನ ಲೇಖನದವರೆಗೆ ನಮಸ್ಕಾರ :)
chennagide, keep it up
ReplyDeleteತುಂಬಾ ಚನ್ನಾಗಿ ಇದೆ ... ಸೂಪರ್
ReplyDeleteಗುರು ಮುಂದಿನ ಬಾರಿ ರೂಪ್ ಕುಂಡ್ ಗೆ ಹೋಗೋಣ... ಯೋಜನೆ / ವ್ಯವಸ್ಥೆ ಮಾಡಿ ಗುರು.. !! (ವೈಯಕ್ತಿಕವಾಗಿ)
Nice Amar. Good Info.
ReplyDelete