ನನ್ನ ಅಪ್ಪ ಕಟ್ಟಿ ಕೊಟ್ಟಿದ್ದ ಸುಂದರ ಬದುಕು; ಕೆಲವರ ಸ್ವಾರ್ಥ ಸಾಧನೆಯ ಪ್ರಯತ್ನಕ್ಕೆ ನಾನು ಮಣಿಯದೆ ಇದ್ದಾಗ ಇನ್ನೇನು ಮುಳುಗುವ ಹಂತದಲ್ಲಿತ್ತು. ಮನೆಯಲ್ಲಿ ಎಲ್ಲರೂ ಸಾಮಾನ್ಯವಾಗಿದ್ದರೂ ಒಳಗೆ ಯಾರಿಗೂ ಖುಷಿ ಮತ್ತು ಸಮಾಧಾನವಿರಲಿಲ್ಲ. ಅತ್ತ ನನ್ನ ಗೆಳೆಯ ತನ್ನ ಬದುಕು ಕಟ್ಟಿಕೊಳ್ಳಲು ದೂರದ ದಕ್ಷಿಣ ಆಫ್ರಿಕಾ ದೇಶದಲ್ಲಿ ಹೋರಾಟ ಮಾಡುತ್ತಿದ್ದ. ನನಗೆ ಅವನೊಡನೆ ಸಂಪರ್ಕಿಸಲು ಇದ್ದ ಮಾರ್ಗವೊಂದೆ ಅದು ಗೂಗಲ್ ನ ಚಾಟ್ ಸೇವೆ. ದೂರದ ಬೆಟ್ಟ ನುಣ್ಣಗೆ (ಎಲ್ಲವು ಹಾಗೆ ಅಲ್ಲವೇ?) ಹಾಗೆ ಅಲ್ಲಿನ ಸಂಸ್ಥೆ ಕೇವಲ ಬಾರತೀಯರನ್ನೇ ಅಲ್ಲಿ ನೇಮಕ ಮಾಡಿಕೊಳ್ಳುತಿತ್ತು ಮತ್ತು ಅವರ ಪಾಸ್ಪೋರ್ಟ್ ಮತ್ತು ಅಂಕ ಪಟ್ಟಿಗಳನ್ನು ಎರಡು ವರ್ಷದ ಅವಧಿಗೆ ವಶ ಪಡಿಸಿಕೊಳ್ಳುತಿತ್ತು.
ಗೆಳೆಯನ ಜೊತೆ ಮಾತು-ಕಥೆ-ವ್ಯಥೆಯೆಲ್ಲವೂ ಗೂಗಲ್ ನ ಚಾಟ್ ನ ಮೂಲಕವೇ ನಡೆಯುತಿತ್ತು. ಅವನಿಗೋ ಹೇಗಾದರೂ ಭಾರತಕ್ಕೆ ಬರಬೇಕೆಂದು ಆಸೆ ಆದರೆ ಅಲ್ಲಿನ ಮಾಲೀಕ ನಮ್ಮ ಒಪ್ಪಂದ ಮೂರು ವರ್ಷ ಇರುವುದು ಬೇಗ ಭಾರತಕ್ಕೆ ಹೋಗಬೇಕಾದರೆ ಕೆಲವು ಲಕ್ಷ ರೂಪಾಯಿಗಳನ್ನು ಕಟ್ಟಿ ಹೋಗು ಅಂತ ಹೇಳಿ ಎಲ್ಲರಿಗು ಹೆದರಿಸುತ್ತಿದ್ದ. ಇಂತ: ಸಮಯದಲ್ಲಿ ಯಾರಿಗಾದರೂ ನಾನು ಪ್ರವಾಸ ಹೋಗುತ್ತಿದ್ದೇನೆ ಎಂದು ಹೇಳಿದರೆ ಅವರು ನಕ್ಕು ಬಿಡುತ್ತಿದ್ದರು. ಇವನ ಅಂಡಿಗೆ ಬೆಂಕಿ ಬಿದ್ದಿದೆ ಆದರೂ ಪ್ರವಾಸ ಹೋಗುವ ಹುಚ್ಚು ಎಂದು.
ಯಾವುದೊ ಪವಾಡ ನಡೆದು ಆಫ್ರಿಕಾದೇಶದಲ್ಲಿದ್ದ ಸ್ನೇಹಿತ, ಭಾರತಕ್ಕೆ ಮುಂದಿನ ತಿಂಗಳು ಬರುವೆ ಎಂದು ತಿಳಿಸಿದ, ಬಂದ ನಂತರ ಎಲ್ಲಿಗಾದರೂ ಹೋಗುವ ತುಂಬಾ ಬೇಜಾರಾಗಿದೆ ಎಂದ. ಸರಿ ಎಲ್ಲಿಗೆ ಹೋಗುವುದು ಎಂಬ ಯೋಚನೆ ಶುರುವಾಯಿತು. ಇತ್ತ ಮನದಲ್ಲಿ ಬೇಸರ, ಜೊತೆಗೆ ಆಗಿದ್ದು ಆಗಲಿ ಒಂದು ಕೈ ನೋಡೇ ಬಿಡುವ ಎಂಬ ಹುಂಬತನ. ಸಮುದ್ರತೀರ ಎಂದರೆ ಅದೇನೋ ಸೆಳೆತ. ಸಮುದ್ರದ ಮುಂದೆ ಕುಳಿತು ಅದರ ಅಲೆಗಳು ನಮ್ಮ ಕಾಲುಗಳ ಬಳಿ ಬಂದು ವಾಪಾಸ್ಸು ಹೋಗುವುದೇ ಚೆಂದ. ಜೊತೆಗೆ ಮರಳನ್ನೂ ಓಯ್ಯುವಾಗ ಕಾಲ ಬಳಿ ಉಂಟಾಗುವ ಕುಸಿತ ಮತ್ತು ಅಲೆಗಳು ಹೆಚ್ಚಾಗಿ ನಮ್ಮ ಬಟ್ಟೆಯನ್ನು ತೋಯಿಸಿದಾಗ ಉಂಟಾಗುವ ಭಾವವೇ ನಮ್ಮ ಸ್ವಭಾವ :)
ಗೋವಾಗೆ ಹೋಗೋಣ ಎಂದರೆ ಅಲ್ಲಿನ ಜನ ಜಂಗುಳಿ, ಕುಡುಕ ಮಿತ್ರರ ಹಾವಳಿ, ಪಬ್ ಸಂಸ್ಕೃತಿ ಸಾಕು ಸಾಕು ಅನಿಸಿತು. ಎಲ್ಲಿಗಾದರೂ ದೂರ ಬಹು ದೂರ ಹೋಗುವ ಬಾರ (ಕುವೆಂಪು ರಚಿತ ಬಾವಗೀತೆ) ಎಂದೆನ್ನಿಸಿ ನಿರ್ಜನ ಸಮುದ್ರ ತೀರಗಳ ಬಗ್ಗೆ ಹುಡುಕಿದಾಗ ಸಿಕ್ಕಿದ್ದೇ ಹವಳದ ದ್ವೀಪಗಳು. ಗೂಗಲ್ ನಲ್ಲಿ ಲಕ್ಷದ್ವೀಪಗಳಿಗೆ ಹೋಗುವ ದಾರಿಗಳ ಬಗ್ಗೆ ಮತ್ತು ಪ್ರವಾಸದ ಬಗ್ಗೆ ಎಲ್ಲ ಹುಡುಕಿ ತೆಗೆದು, ಅಳೆದು ಟೂರ್ ಬಗ್ಗೆ ಪಿ. ಹೆಚ್. ಡಿ. ಮಾಡಿದ ನಂತರ ಒಂದು ಮಟ್ಟದ ಅರಿವು ಬಂತು.
ಕೇರಳದ ಎರ್ನಾಕುಲಂ ಪಟ್ಟಣದಲ್ಲಿರುವ ಟ್ರಾವೆಲ್ ಸಂಸ್ಥೆಯಿಂದ ನಮ್ಮ ಟೀಕೆಟ್ ಅನ್ನು ಕಾಯ್ದಿರಿಸಿದೇವು. ಈ ಸಂಸ್ಥೆ ಸ್ಪೋರ್ಟ್ಸ್ ನ ಅನುಮತಿ ಪಡೆದಿತ್ತು (ಲಕ್ಷದ್ವೀಪ ಪ್ರವಾಸ ಸಂಸ್ಥೆಯ ಹೆಸರು ಸ್ಪೋರ್ಟ್ಸ್ ಎಂದು). ನಾವು ಬೆಂಗಳೂರಿನಿಂದ ಮಂತ್ರಾಲಯವನ್ನು ರೈಲಿನಲ್ಲಿ ತಲುಪಿ ಅಲ್ಲಿ ಸ್ನಾನ ಮಾಡಿ ಗುರು ರಾಯರ ದರ್ಶನ ಪಡೆದು, ನಂತರ ಅಲ್ಲಿರುವ ಕೆಟ್ಟ ಹೋಟೆಲ್ನಲ್ಲಿ ತಿಂಡಿ ತಿಂದು ರೂಮಿಗೆ ಹೋಗಿ ಮಲಗಿದೆವು, ಸಂಜೆಯ ವೇಳೆಗೆ ಎರ್ನಾಕುಲಂ ಗೆ ಹೋಗುವ ರೈಲನ್ನು ಹತ್ತಿ ಮಲಗಿದೆವು ಬೆಳಗ್ಗೆ ಎಚ್ಚರವಾದಾಗ ಸಮಯ 4 ಗಂಟೆ, ರೈಲು ಯಾವುದೊ ಒಂದು ನಿಲ್ದಾಣದಲ್ಲಿ ನಿಂತಿತ್ತು. ನಮ್ಮ ಸ್ಟೇಷನ್ ಬರುವುದು 5 ಗಂಟಿಗೆ ಎಂದು ನಾನು ಸುಮ್ಮನಾದೆ, ಗೆಳೆಯ ಕೆಳಗಡೆ ಇಳಿದು ಹೋಗಿ ನೋಡಿ ಬಂದು ಗುರು ಇದು ನಮ್ಮದೇ ನಿಲ್ದಾಣ ಅಂದ. ಅಲ್ಲಿ ಕೇಳಲು ಯಾರೂ ಇರಲಿಲ್ಲವಾದ್ದರಿಂದ ನಮ್ಮ ಲಗೇಜ್ ಸಮೇತ ಕೆಳಗಿಳಿದೆವು. ಓಯೋನ ರೂಮ್ನ ಕೊನೆಗೂ ಹುಡುಕಿ ಅಲ್ಲಿ ಹೋಗಿ ಮಲಗಿದ್ದು ಸುಮಾರು 6 ಗಂಟೆಗೆ. ನಂತರ ಎದ್ದು ತಿಂಡಿ ಮತ್ತು ಊಟ ಮುಗಿಸಿ ಕಾರ್ ನಲ್ಲಿ ವಿಲ್ಲಿಂಗ್ಡವ್ನ್ ಐಲ್ಯಾಂಡ್ ಗೆ ಹೋದೆವು. ಅಲ್ಲಿಂದ ಹಡಗನ್ನು ಏರಿ,
ಅವರು ಕೊಟ್ಟ ಟೀ ಬಿಸ್ಕತ್ ಅನ್ನು ಸೇವಿಸಿ ನಮ್ಮ ರೂಮಿನಲ್ಲಿ ವಿಶ್ರಾಂತಿ ಪಡೆದವು. ಸ್ವಲ್ಪ ಹೊತ್ತಿನ ಬಳಿಕ ಹಡಗು ಎರ್ನಾಕುಲಂ ಅನ್ನು ಬಿಟ್ಟು ಹೊರಟಿತು.
ರಾತ್ರಿಯ ಊಟ ಸುಮಾರು ಎಂಟು ಗಂಟೆಗೆ ಊಟದ ಮೊದಲು ಊಟದ ಡಂಗುರ ಸಾರಿಸಿ ಊಟ ತಯಾರಾಗಿದೆ ಎಂದು ಹೇಳಿದ ಬಳಿದ ಊಟ. ಊಟದ ಮೆನುವಿನಲ್ಲಿ ಸಸ್ಯಾಹಾರಿ ಮತ್ತು ಮಾಂಸಹಾರಿ ಗಳಿಗೆ ಪ್ರತ್ಯೇಕ ಕೌಂಟರ್ ಗಳಿದ್ದವು. ನಾವು ಎರಡು ಕೌಂಟರ್ನಲ್ಲಿ ಊಟ ಮಾಡಿ ಬಂದು ತುಂಬಾ ಹೊತ್ತಿನ ತನಕ ಮಾತಾನಾಡಿ ಮಲಗಿದೆವು. ಬೆಳಗ್ಗೆ ಎದ್ದಾಗ ಹಡಗು ಆಗಲೇ ನಿಂತಿತ್ತು. ನೋಡಿದಾಗ ಕನಸಿನಲ್ಲಿ ನೋಡಿದಹಾಗೆ ಇತ್ತು. ತಿಂಡಿ ತಿಂದು ನಮ್ಮನ್ನು ಕರೆದೊಯ್ಯಲು ಬಂದಿದೆ ಸಣ್ಣ ದೋಣಿ ಏರಿ ಕಲ್ಪೆನಿ ದ್ವೀಪಕ್ಕೆ ಹೋದೆವು.

ದ್ವೀಪದ ಹತ್ತಿರ ಆಳ ಸಾಕಾಗದ ಕಾರಣ ಹಡಗನ್ನು ದೂರದಲ್ಲೇ ಲಂಗರು ಹಾಕಿ, ಚಿಕ್ಕ ಚಿಕ್ಕ ಬೋಟ್ಗಳಲ್ಲಿ ದ್ವೀಪಕ್ಕೆ ಕರೆದೊಯ್ದು ಮತ್ತು ವಾಪಾಸ್ ಕರೆತರುತ್ತಾರೆ. ಅಂದಿನ ಹಗಲೆಲ್ಲವನ್ನು ದ್ವೀಪದಲ್ಲೆ ಕಳೆದು ಸಂಜೆಯ ವೇಳೆಗೆ ಮತ್ತೆ ಹಡಗಿಗೆ ವಾಪಾಸ್ ಬಂದೆವು. ಮದ್ಯಾನ್ನ ದ ಊಟದಲ್ಲಿ ಮೀನು ಮತ್ತು ಕೋಳಿ ಇದ್ದವು. ಊಟ ಮತ್ತು ಆಟಗಳು ಸೊಗಸಾಗಿದ್ದವು. ಸಂಜೆ ಹಡಗಿಗೆ ಬಂದ ನಂತರ ನಾವು ರೂಮಿಗೆ ಹೋಗದೆ ಹಡಗಿನ ಡೆಕ್ ನಲ್ಲಿ ಕುಳಿತು ಹಳೆಯ ಕನ್ನಡ ಹಾಡುಗಳನ್ನು ಕೇಳುತ್ತ ಮತ್ತು ಹರಟೆ ಹೊಡೆಯುತ್ತ ಕುಳಿತಿರುತಿದ್ದೆವು. ಅಲೆಗಳ ಶಬ್ದ ಮತ್ತು ಹಡಗು ನೀರನ್ನು ಸೀಳಿಕೊಂಡು ಹೋಗುವ ಶಬ್ದ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು. ರಾತ್ರಿ ಊಟದ ಗಂಟೆ ಯಾವಾಗ ಬಾರಿಸುವುದೋ ಎಂದು ಕಾಯ್ದು; ಗಂಟೆ ಬಾರಿಸಿದ ತಕ್ಷಣ ಹೋಗಿ ಚೆನ್ನಾಗಿ ಬ್ಯಾಟಿಂಗ್ ಮಾಡಿ ಬಂದು ಮತ್ತೆ ಡೆಕ್ ನಲ್ಲಿ ಕುಳಿತು ನಂತರ ಮಲಗಲು ರೂಮಿಗೆ ಹೋಗುತಿದ್ದೆವು.
ಎರಡನೆಯ ದಿನ ಕವರಟ್ಟಿ ದ್ವೀಪ ಮತ್ತು ಮೂರನೆಯ ಹಾಗೂ ಕಡೆಯ ದಿನ ಮಿನಿಕಾಯ್ ದ್ವೀಪ ನೋಡಿದೆವು. ಇದರಲ್ಲಿ ಕವರಟ್ಟಿ ಲಕ್ಷದ್ವೀಪದ ರಾಜಧಾನಿ ಇದು ಭಾರತದ ಕೇಂದ್ರಾಡಳಿತ ಪ್ರದೇಶ. ಇಲ್ಲಿ ನಾವು ಮತ್ತು ನೀವು ನೆಲಸಲು ಆಗುವುದಿಲ್ಲ ಏನಿದ್ದರೂ ನೆಂಟರ ತರಹ ಹೋಗಿ ಬರಬಹುದಷ್ಟೆ. ಇರುವುದರಲ್ಲಿ ಮನಿಕಾಯ್ ದ್ವೀಪ ಅತ್ಯಂತ ಸುಂದರವಾದ ದ್ವೀಪ, ಇಲ್ಲಿಂದ ಮಾಲೆ ಮಾಲ್ಡೀವ್ಸ್ನ ರಾಜಧಾನಿ ಕೇವಲ 60 ಕಿಲೋಮೀಟರ್ ಗಳು. ನೋಡುವುದಕ್ಕೆ ಮಿನಿಕಾಯ್ ಮಾಲ್ಡೀವ್ಸ್ ನ ತರಾನೇ ಇದೆ. ಅಣ್ಣ ತಮ್ಮನ ಮಕ್ಕಳು ಒಂದೇ ತರ ಇರುವಂತೆ.
ನಮ್ಮ ಹಡಗು ಮಿನಿಕಾಯ್ ನಿಂದ ಹೊರತು ಮಾರನೆಯ ದಿನ ಬೆಳಗ್ಗೆ ಎರ್ನಾಕುಲಂ ತಲುಪಿತು. ಅಲ್ಲಿಂದ ಬಂದು ಎರ್ನಾಕುಲಂ ನ ರೂಮ್ನಲ್ಲಿ ಎರಡು ದಿನ ವಿಶ್ರಾಂತಿ ಪಡೆಯಬೇಕಾಯ್ತು. ನನಗೆ ತುಂಬಾ ಶೀತ ಮತ್ತು ಕಫ ಉಂಟಾಗಿತ್ತು. ಸ್ವತಃ ವೈದ್ಯ ಮಾಡಿಕೊಂಡು ಮೂರು-ನಾಲ್ಕು ತರಹ ಮಾತ್ರೆ ತೆಗೆದುಕೊಂಡು ಬರಿ ಮಲಗಿದ್ದಾಯ್ತು. ಎಚ್ಚರವಾದಾಗ ಮಲಬಾರ್ ಹೋಟೆಲ್ನ ಊಟ ಮತ್ತೆ ನಿದ್ದೆ. ನನಗೋಸ್ಕರ ಗೆಳೆಯ ಎಲ್ಲವನ್ನು ಸಹಿಸಿಕೊಂಡ. ಗೆಳೆಯ ಎಂದರೆ ಹಾಗೆಯೇ? ಅಥವಾ ಅಲ್ಲೂ ಕಟ್ಟು-ಪಾಡು ಗಳಿರುತ್ತವೆಯೇ ಎಂದು ಓದುಗರಾದ ನೀವು ಕಮೆಂಟ್ ನಲ್ಲಿ ಹೇಳಬೇಕು.
ಮರಳಿ ಬೆಂಗಳೂರಿಗೆ ಬಂದು ಊರಿಗೆ ಹೋಗ್ಗಿದಾಯ್ತು ಅಲ್ಲಿ ನನ್ನ ಸಹೋದರ ಅಪ್ಪನಿಗೆಂದು ಹೊಸ ನೀಲಿ ಬಣ್ಣದ ಸ್ಕೂಟರ್ ತಂದಿದ್ದ ಅದಕ್ಕೆ ಕಾರಣಕರ್ತರು ನಮ್ಮಮ್ಮ ಮತ್ತು ನನ್ನ ತಂಗಿ. ಹೀಗೆ ಸಂಕಟದ ಮದ್ಯೆಯೂ ಕೂಡ ಸಂತಸ ಬದುಕ ಬಹುದು ಎಂದು ನನಗೆ ತಿಳಿದ ಸಮಯ ಅದು.
ಏನೇ ಕಷ್ಟ-ನಷ್ಟಗಳಿದ್ದರೂ ಅದು ನಮ್ಮ ಭಾವನೆಯಷ್ಟೇ, ಅದನ್ನು ಒಂದು ಮೂಲೆಗೆ ತಳ್ಳಿ ನಾವು ಬದುಕ ಬಹುದು.
No comments:
Post a Comment